Advertisement

ಕಲೆ ಬದುಕುವುದನ್ನು ಕಲಿಸಿತು: ಮಂಜಮ್ಮ ಜೋಗತಿ

01:08 PM Mar 15, 2022 | Team Udayavani |

ಕೂಡಲಸಂಗಮ: ತೃತೀಯ ಲಿಂಗಿಯಾದ ನಾನು ಜೀವನದ ಚೀಲ ತುಂಬಿಕೊಳ್ಳಲು, ಬದುಕಲು ಜಾನಪದ ಕಲೆಯನ್ನು ನಂಬಿ ಕಲಾ ಕ್ಷೇತ್ರಕ್ಕೆ ಕಾಲಿಟ್ಟೆ, ಕಲೆ ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಸಿತು ಎಂದು ಪದ್ಮಶ್ರೀ ಪುರಸ್ಕೃತ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

Advertisement

ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ಸೋಮವಾರ ನಡೆದ ಮಾತೆ ಮಹಾದೇವಿ 3ನೇ ಲಿಂಗೈಕ್ಯ ಸಂಸ್ಮರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಸಮಾಜ ಬದಲಾಗಬೇಕು. ತೃತೀಯ ಲಿಂಗಿಗಳನ್ನು ಬೇರೆಯವರು ಎಂದು ನೋಡುವ ಪರಿಪಾಠ ಬದಲಾಗಬೇಕು ಅವರೂ ನಮ್ಮವರೇ ಎಂಬ ದೃಷ್ಟಿ ಎಲ್ಲರಲ್ಲೂ ಮೂಡಬೇಕು. ಚವಡಕಿ ಪದ ಹಾಡಿ, ನೃತ್ಯ ಮಾಡಿದ ನನ್ನನು ಇಂತಹ ವೈಚಾರಿಕ ಕಾರ್ಯಕ್ರಮಕ್ಕೆ ಆಹ್ವಾನಿಸಿ ಉದ್ಘಾಟಿಸಲು ಅವಕಾಶ ಮಾಡಿಕೊಟ್ಟದ್ದು ಬಸವಾದಿ ಶರಣರ ಆಸೆಯನ್ನು ಈಡೇರಿಸಿದಂತೆ. ನಾವು ನಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಕಳುಹಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ, ಕಲೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಮಕ್ಕಳನ್ನು ಮೊಬೈಲ್‌ದಿಂದ ದೂರ ಇಟ್ಟು ಶರಣರ ವಚನ ಪುಸ್ತಕಗಳನ್ನು ಓದಲು ಹಚ್ಚಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಎಂಬ ಅರಿವು ನಮ್ಮಗೆ ಇಲ್ಲದಾಗ ಸ್ವತಂತ್ರ ಧರ್ಮ ಎಂಬ ಅರಿವು ಮೂಡಿಸಿದವರು ಲಿಂಗಾನಂದ ಸ್ವಾಮೀಜಿ, ಮಾತಾಜಿ. ಮಾನವೀಯ ಮೌಲ್ಯಗಳ ಗಣಿಯಾದ ಲಿಂಗಾಯತ ಧರ್ಮ 12ನೇ ಶತಮಾನದಲ್ಲಿಯೇ ಬಸವಣ್ಣನವರಿಂದ ಸ್ಥಾಪಿತಗೊಂಡಿದೆ. ಸದ್ಯ ಸಾಂವಿಧಾನಿಕ ಮಾನ್ಯತೆ ಪಡೆಯುವ ಕಾರ್ಯವನ್ನು ನಾವು ಮಾಡಬೇಕು. ಅಧಿ ಕಾರ, ಹಣದ ಆಸೆಗೆ ಲಿಂಗಾಯತ ಧರ್ಮ ವಿರೋಧಿಸುವುದು ಸರಿಯಲ್ಲ. ಇಂದು ವಿರೋಧಿಸುವವರು ಕೆಲವೇ ದಿನಗಳಲ್ಲಿ ನಮ್ಮೊಂದಿಗೆ ಬರುವರು. ಲಿಂಗಾಯತ ಧರ್ಮವನ್ನು ಕೆಲವು ಲಿಂಗಾಯತರೇ ವಿರೋ ಧಿಸುವರು ಅದಕ್ಕೆ ಅವರ ಅಜ್ಞಾನವೇ ಕಾರಣ. ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಶಿವಶರಣರ ಆಶಯಗಳನ್ನು ಅರ್ಥಮಾಡಿಕೊಳ್ಳುವ ಕಾರ್ಯವನ್ನು ಮಾಡಬೇಕು ಎಂದರು.

ಬೀದರ ಬಸವ ಸೇವಾ ಪ್ರತಿಷ್ಠಾನದ ಡಾ| ಅಕ್ಕ ಗಂಗಾಂಬಿಕೆ ಮಾತನಾಡಿ, ಹಾಳು ಕೊಂಪೆಯಾದ ಬಸವಣ್ಣನ ವಿದ್ಯಾಭೂಮಿ, ಐಕ್ಯಕ್ಷೇತ್ರ ಕೂಡಲ ಸಂಗಮ, ಕಾರ್ಯಕ್ಷೇತ್ರ ಬಸವ ಕಲ್ಯಾಣ ವನ್ನು ಜಗತ್ತಿಗೆ ಪರಿಚಯಿಸಿದವರು ಮಾತಾಜಿ. ಬಸವಾದಿ ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಮಾತಾಜಿಯವರ ಕೊಡುಗೆ ಅಪಾರವಾಗಿದೆ. ಧರ್ಮ, ಆಧ್ಯಾತ್ಮ, ನೈತಿಕ ವಿಸ್ತಾರ ಮಾತಾಜಿಯ ಮೂಲ ಕಲ್ಪನೆಗಳಾಗಿದ್ದವು. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಚೌಕಟ್ಟು ಹಾಕಿಕೊಟ್ಟು ಸ್ವತಂತ್ರ ಧರ್ಮದ ಮಾನ್ಯತೆಗೆ ಜೀವನವಿಡಿ ಹೋರಾಡಿದರು ಎಂದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಸದ್ಯ 1200 ರಾಷ್ಟ್ರೀಯ ಬಸವ ದಳದ ಶಾಖೆಗಳು ಇದ್ದು, ಬರುವ ದಿನಗಳಲ್ಲಿ ಹೆಚ್ಚಿನ ಶಾಖೆ ತೆರೆಯುತ್ತೇವೆ. ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿ ಲಿಂಗಾಯತ ರ್ಯಾಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಎಲ್ಲ ಬಸವತತ್ವ ಮಠಾ ಧೀಶರೊಂದಿಗೆ ಚರ್ಚಿಸಿ ದಿನಾಂಕ ಘೋಷಣೆ ಮಾಡುತ್ತೆವೆ ಎಂದರು. ಬೀದರದ ಹಿರಿಯ ನ್ಯಾಯವಾದಿ ಗಂಗಶೆಟ್ಟಿ ಪಾಟೀಲ ಅಧ್ಯಕ್ಷತೆ ವಹಿಸಿದರು.

Advertisement

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಮಹಾದೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ನಾಗನೂರದ ಮಾತೆ ಬಸವ ಗೀತಾ, ಧಾರವಾಡದ ಮಾತೆ ಅಕ್ಕನಾಗಲಾಂಬಿಕೆ, ಬಸವಯೋಗಿ ಸ್ವಾಮೀಜಿ ಇದ್ದರು.

ತೆಲಂಗಾಣ ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ವಿಜಯಕುಮಾರ ಪಟ್ನೆಯವರಿಗೆ ಶರಣ ದಾಸೋಹ ರತ್ನ, ಹುಬ್ಬಳ್ಳಿ ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಕಲ್ಯಾಣಪ್ಪ ಪರಮಾದಿ ಅವರಿಗೆ ಶರಣ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next