Advertisement

ಕಲೆ,ಸಂಗೀತ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕ:ಪ್ರೊ|ಕಿರಣ್‌ಸೇಥಿ

12:54 PM Jun 19, 2018 | |

ಮಹಾನಗರ : ಭಾರತೀಯ ಶಾಸ್ತ್ರೀಯ ಸಂಗೀತ, ಕಲೆ, ಸಂಸ್ಕೃತಿಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಹೊಸದಿಲ್ಲಿಯಲ್ಲಿ 41 ವರ್ಷಗಳ ಹಿಂದೆ ಸ್ಥಾಪನೆಗೊಂಡಿತು. ಸ್ಪಿಕ್‌ವೆುಕೆ ಅಭಿಯಾನ ಆರಂಭಗೊಂಡಿತು. ಐಐಟಿ ಪ್ರೊಫೆಸರ್‌ ಆಗಿದ್ದ ಕಿರಣ್‌ ಸೇಥಿ ಇದರ ಸಂಸ್ಥಾಪಕರು.

Advertisement

ಸ್ಪಿಕ್‌ವೆುಕೆ ಪ್ರಸಕ್ತ ದೇಶದ 500 ಕ್ಕೂ ಅಧಿಕ ಸ್ಥಳಗಳಲ್ಲಿ ತನ್ನ ಘಟಕವನ್ನು ಹೊಂದಿದೆ. ಅಮೆರಿಕಾ, ನಾರ್ವೆ, ಜರ್ಮನಿ, ಇಂಗ್ಲೆಂಡ್‌ ಸೇರಿದಂತೆ ವಿದೇಶಗಳ 50ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಪಸರಿಸಿದೆ. ಮಂಗಳೂರಿನಲ್ಲಿ 1987ರಲ್ಲಿ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಸ್ಪಿಕ್‌ವೆುಕೆ ಘಟಕ ಸ್ಥಾಪನೆಯಾಗಿದ್ದು 30 ವರ್ಷಗಳಿಂದ ದ.ಕ.ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಪ್ರೊ| ಕಿರಣ್‌ ಸೇಥಿ ಅವರು ಮಂಗಳೂರಿನ ಶಾರದಾ ವಿದ್ಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಪಿಕ್‌ವೆುಕೆಯ ಸ್ಥಾಪನೆ, ಉದ್ದೇಶ ಹಾಗೂ ಯೋಚನೆಗಳ ಬಗ್ಗೆ ಉದಯವಾಣಿಯೊಂದಿಗೆ ತನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಎಂಜಿನಿಯರ್‌ ಪ್ರೊಫೆಸರ್‌ ಸಂಗೀತ ಕಲೆಗಳತ್ತ ಆಕರ್ಷಿತನಾಗಿದ್ದು
ನಾನು ಆರಂಭದಲ್ಲಿ ಪಾಶ್ಚಿಮಾತ್ಯ ಸಂಗೀತದತ್ತ ಆಕರ್ಷಿತನಾಗಿದ್ದೆ .ಗಿಟಾರ್‌ ಬಗ್ಗೆ ನನ್ನಲ್ಲಿ ವಿಶೇಷ ಆಸಕ್ತಿ ಇತ್ತು. ಒಮ್ಮೆ ನಮ್ಮ ಐಐಟಿಯಲ್ಲಿ ನನ್ನ ಸಹದ್ಯೋಗಿ ಪ್ರೊಫೆಸರ್‌ ಓರ್ವರು ಒಂದು ದಿನವಿಡಿ ಶಾಸ್ತ್ರಿಯ ಸಂಗೀತ, ಕಲೆಗಳ ಕಾರ್ಯಕ್ರಮ ಆಯೋಜಿಸಿದ್ದರು. ಆನೇಕ ಪ್ರಸಿದ್ದ ಕಲಾವಿದರು ಅದರಲ್ಲಿ ಕಾರ್ಯಕ್ರಮ ನೀಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ನನ್ನಲ್ಲಿ ಭಾರತೀಯ ಶಾಸ್ತ್ರಿಯ ಸಂಗೀತ ಕಲೆಗಳ ಬಗ್ಗೆ ಆಸಕ್ತಿ ಹುಟ್ಟಿತು. ಮುಂದಕ್ಕೆ ಇದು ಬೆಳೆಯುತ್ತಾ ಹೋಯಿತು. ನಾನು ಪಿಎಚ್‌ಡಿ ಮಾಡುವಾಗ, ಸಂಶೋಧನೆಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲೂ ಆನೇಕ ಪ್ರಸಿದ್ದ ಕಲಾವಿದರ, ಸಂಗೀತ ಕಾರ್ಯಕ್ರಮಗಳನ್ನು ನೋಡುವ, ಕೇಳುವ ಅವಕಾಶ ಲಭಿಸಿತ್ತು.ನಮ್ಮ ಭಾರತೀಯ ಕಲೆಗಳು, ಸಂಗೀತ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ.ಇದರ ಬಗ್ಗೆ ಯುವಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ ಸಂರಕ್ಷಿಸಬೇಕು ಹಾಗೂ ಪ್ರಪಂಚದ ಇತರ ಭಾಗಗಳಿಗೂ ಪರಿಚಯಿಸಬೇಕು ಎಂಬು ಬಯಕೆ ನನ್ನಲ್ಲಿ ಮೂಡಿತು. ಇದು ಮುಂದಕ್ಕೆ ಸ್ಪಿಕ್‌ವೆುಕೆಯ ಸ್ಥಾಪನೆಗೆ ಕಾರಣವಾಯಿತು.

ಆರಂಭದ ದಿನಗಳು
ಹೊಸದಿಲ್ಲಿಯಲ್ಲಿ ಐಐಟಿಯ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸ್ಪಿಕ್‌ವೆುಕೆ ಪರಿಕಲ್ಪನೆ ಪ್ರಾರಂಭಗೊಂಡಿತು. ಪ್ರಥಮ ಕಾರ್ಯಕ್ರಮವನ್ನು ಆಯೋಜಿಸಿದ್ದೇವು. ಕಾರ್ಯಕ್ರಮ ಆರಂಭದ ಹೊತ್ತಿನಲ್ಲಿ
5 ಮಂದಿ ಇದ್ದರು. ಆರಂಭಗೊಂಡಾಗ ಇನ್ನೂ 5 ಮಂದಿ ಬಂದರು. ಮುಕ್ತಾಯದ ಹಂತದದಲ್ಲಿ ಮತ್ತೇ 5 ಮಂದಿ ಆಗಮಿಸಿದರು. ಒಟ್ಟು ಹೀಗೆ ಕಾರ್ಯಕ್ರಮದಲ್ಲಿದ್ದದ್ದು 15 ಮಂದಿ. ಇದರಿಂದ ನಾವು ನಿರಾಶರಾಗಲಿಲ್ಲ. ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದೇವು. ನಿಧಾನವಾಗಿ ಯಶಸ್ಸು ಪಡೆದುಕೊಂಡಿತು. ನನ್ನ ವಿದ್ಯಾರ್ಥಿಗಳು ಉದ್ಯೋಗದ ನಿಮಿತ್ತ ದೇಶದ ಬೇರೆ ಬೇರೆ ಕಡೆಗಳಿಗೆ ತೆರಳಿದ ವಿದ್ಯಾರ್ಥಿಗಳು ಅಲ್ಲಿ ಸ್ಪಿಕ್‌ವೆುಕೆಯನ್ನು ಪ್ರಾರಂಭಿಸಿದರು. ವಿದೇಶಕ್ಕೆ ತೆರಳಿದ ವಿದ್ಯಾರ್ಥಿಗಳು ಅಲ್ಲಿ ಘಟಕಗಳನ್ನು ಸ್ಥಾಪಿಸಿದರು. ಪ್ರಸ್ತುತ ದೇಶದಲ್ಲಿ 500 ಕ್ಕೂ ಅಧಿಕ ನಗರಗಳಲ್ಲಿ ಘಟಕಗಳನ್ನು ಹೊಂದಿದೆ. ವಿದೇಶಗಳಲ್ಲಿ ಅಮೆರಿಕಾ, ಇಂಗ್ಲೆಂಡ್‌, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 50 ಕ್ಕೂ ಅಧಿಕ ನಗರಗಳಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.

ಮುಂದಿನ ಗುರಿ
ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳು, ಶಾಲೆಗಳಿಗೆ ಸ್ಪಿಕ್‌ವೆುಕೆ ಅಭಿಯಾನ ತಲುಪಬೇಕು ಎಂಬುದು ನಮ್ಮ ಗುರಿಯಾಗಿದೆ. 2020ರಲ್ಲಿ ದೇಶದ ಪ್ರತಿಯೋರ್ವ ವಿದ್ಯಾರ್ಥಿಯನ್ನು ಮುಟ್ಟ ಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಚಟುವಟಿಕೆಗಳನ್ನು ಗ್ರಾಮಾಂತರ ಪ್ರದೇಶಗಳ ಶಾಲೆಗಳಿಗೂ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಯೋಜನೆಗಳನ್ನು ರೂಪಿಸಿದ್ದೇವೆ.
ಕಲಾವಿದರನ್ನು ಆಯ್ಕೆಮಾಡಿಕೊಂಡು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಮನಸ್ಸುಗಳಲ್ಲಿ ಭಾರತೀಯರ ಶಾಸ್ತ್ರಿಯ ಸಂಗೀತ ,ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ. ಇದರಲ್ಲಿ ಎಲ್ಲಾ ಪ್ರಕಾರದ , ಎಲ್ಲಾ ಭಾಗದ ಕಲೆಗಳು ಒಳಗೊಂಡಿರುತ್ತದೆ.

Advertisement

 ಕಲೆ, ಸಂಗೀತ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕ
ಕಲೆ,ಸಂಗೀತ ಮುಂತಾದುವುಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳುವುದು, ಅಭ್ಯಾಸ ಮಾಡುವುದು ಅವರ ಶೈಕ್ಷಣಿಕ ಸಾಧನೆಗೆ ಅಡಚಣೆಯಾಗುತ್ತದೆ ಎಂಬ ಭಾವನೆ ಪೋಷಕರಲ್ಲಿದೆ. ಇದು ನಿಶ್ಚಿತವಾಗಿಯೂ ತಪ್ಪು. ಆನೇಕ
ವಿಜ್ಞಾನಿಗಳು, ಸಾಧಕರು ಸಂಗೀತ, ಕಲೆಗಳ ಬಗ್ಗೆ ಒಲವು ಹೊಂದಿದ್ದರು. ಕಲೆ ,ಸಂಗೀತ ಅಭ್ಯಾಸ ವಿದ್ಯಾರ್ಥಿಗಳಲ್ಲಿ
ಏಕಾಗ್ರತೆ ಮೂಡಿಸಲು ನೆರವಾಗುತ್ತದೆ.

ಸೆಲ್‌ಫೋನ್‌ ನಿಂದ ದೂರವಿರಿ
ಇತ್ತೀಚಿನ ದಿನಗಳಲ್ಲಿ ಸೆಲ್‌ಪೋನ್‌ ಗಳಿಗೆ ಯುವಜನತೆ ಆಡಿಕ್ಟ್ ಆಗಿರುವುದು ಕಂಡುಬರುತ್ತಿದೆ. ಉಪಯೋಗದ ಉದ್ದೇಶದ ಬದಲು ಅದು ಒಂದು ವ್ಯಸನವಾಗಿ ಬಾಧಿಸತೊಡಗಿದೆ. ನಾವು ವಾರದಲ್ಲಿ ಒಂದುದಿನ ಸೆಲ್‌ ಫೋನ್‌ನಿಂದ ದೂರವಿದ್ದು ಅಂದು ಯಾವುದೇ ಕರೆ ಸ್ವೀಕರಿಸುವುದಿಲ್ಲ , ಇಂಟರ್‌ನೆಟ್‌ನ್ನು ಸೆಲ್‌ಫೋನ್‌ ನಲ್ಲಿ ಬಳಸುವದಿಲ್ಲ ಎಂಬ ಧೃಡ ನಿರ್ಧಾರ ಮಾಡಬೇಕು ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಗ ನಮಗೆ ಸೆಲ್‌ಫೋನ್‌ ಆಡಿಕ್ಟ್ ನಿಂದ ಮುಕ್ತರಾಗುವ ಧೃಡತೆ ಲಭಿಸುತ್ತದೆ.
– ಕಿರಣ್‌ ಸೇಥಿ
ಸ್ಪಿಕ್‌ವೆುಕೆ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next