Advertisement

ಕಲೆ, ಸಾಹಿತ್ಯ, ಗಾಯನವಿರುವೆಡೆ ಅಪರಾಧ ವಿರಳ

07:36 AM Feb 26, 2019 | Team Udayavani |

ರಾಮನಗರ: ಕಲೆ, ಸಾಹಿತ್ಯ, ಗಾಯನವಿರುವ ಜಾಗದಲ್ಲಿ ಅಪರಾಧಗಳು ಬಹಳ ವಿರಳ ಎಂದು ವಿಮರ್ಶಕ ಡಾ.ಮಧುಸೂದನ ಜೋಷಿ ಹೇಳಿದರು. ನಗರದ ಸ್ಫೂರ್ತಿ ಭವನದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್‌ ಹಮ್ಮಿಕೊಂಡಿದ್ದ “ಮುಖ್ಯ ಪೇದೆ ಕೆ.ಎಂ.ಶೈಲೇಶ್‌ ಸಾಹಿತ್ಯ ಕೃಷಿ – ಒಂದು ಅವಲೋಕನ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿ,

Advertisement

-ಇಂದು ಕದಡಿ ಹೋಗುತ್ತಿರುವ ಸಮಾಜವನ್ನು ಶಾಂತ ಸ್ಥಿತಿಗೆ ಬರಲು ಕಾವ್ಯ ಬೇಕು. ರೈತ, ಸೈನಿಕ ಮತ್ತು ಕವಿ ದೇಶವನ್ನು ಕಟ್ಟುವಲ್ಲಿ ಮಹತ್ತರ ಪಾತ್ರವಹಿಸುತ್ತಾರೆ. ಇಲ್ಲಿ ಮುಖ್ಯ ಪೇದೆ ಆಗಿರುವ ಕೆ.ಎಂ.ಶೈಲೇಶ್‌ ಗನ್ನು ಹಿಡಿದ ಕೈ ಪೆನ್ನು ಹಿಡಿದಿದೆ. ವಿಜಯ ಸಾಸನೂರ್‌ ಅವರಂತಹ ಅಧಿಕಾರಿಗಳು ಪತ್ತೆದಾರಿ ಕಾದಂಬರಿಗಳನ್ನು ಬರೆದು ಹೆಸರು ಮಾಡಿದರು ಎಂದು ಸ್ಮರಿಸಿದರು.

ಕಾವ್ಯದ ಮೂಲಕ ಯಶ‌ಸ್ಸು: ಬಸವಣ್ಣನಂತಹ ಮಹನೀಯರು ಯಶ‌ಸ್ಸು ಕಂಡಿದ್ದೆ ಕಾವ್ಯದ ಮೂಲಕ. ಅವರು ತಮ್ಮ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಸರಳವಾಗಿ ಪ್ರಯತ್ನಿಸಿದರು. ಅವರ ಪ್ರಯತ್ನ ಜನರನ್ನು ಬಹುಬೇಗ ತಲುಪಿತು.

ಅದೇ ರೀತಿ ಶೈಲೇಶ್‌ ವೃತ್ತಿಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ಇದ್ದುಕೊಂಡು ಕವನ ಸಂಕಲನಗಳನ್ನು ತರುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅಭಿನಂದನೀಯ. ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಭಿನ್ನತೆ ಬೇಕು ಎಂದು ಅಭಿಪ್ರಾಯಪಟ್ಟರು.

ಕವಿತೆಗಳಲ್ಲಿ ವೈಭವೀಕರಣವಿಲ್ಲ: ಸಾಹಿತಿ ಡಾ.ಸಿಪಿಲೆ ಸತೀಶ್‌ ಮಾತನಾಡಿ, ತನ್ನ ಸುತ್ತಲ ಪರಿಸರ ಪ್ರೋತ್ಸಾಹ ಕೊಡಲಿ ಬಿಡಲಿ ತನ್ನ ಪಾಡಿಗೆ ತಾನು ಬರೆಯುವುದೇ ಸೃಜನಶೀಲತೆ. ಇಲ್ಲಿ ಪೊಲೀಸ್‌ ವೃತ್ತಿಯ ನಡುವೆ ಬಿಡುವು ಮಾಡಿಕೊಂಡು ಶೈಲೆಶ್‌ ಸಾಹಿತ್ಯ, ರಂಗಭೂಮಿ, ಗಾಯನ ಈ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದೇ ಅಚ್ಚರಿ ಮೂಡಿಸುತ್ತದೆ.

Advertisement

ಅವರು ಹಬ್ಬ, ಜಾತ್ರೆ, ದೇವರು ಈ ಎಲ್ಲದರಿಂದ ಸಿಗಬಹುದಾದ ಆನಂದವನ್ನು ತಮ್ಮ ಕವಿತೆಗಳಲ್ಲಿ ತಂದಿದ್ದಾರೆ. ಅವರು ಬಹುತೇಕ ಕವಿತೆಗಳಲ್ಲಿ ಮುಗ್ಧ ಮಗುವಿನಂತೆ ಎಲ್ಲಿಯೂ ವೈಭವೀಕರಣವಿಲ್ಲದೇ ಸಹಜವಾಗಿ ಬರೆಯುತ್ತಾ ಸಾಗಿದ್ದಾರೆ. ಅವರು ತಮ್ಮ ವೃತ್ತಿಯನ್ನು ಎಷ್ಟೊಂದು ಪ್ರೀತಿಸುತ್ತಾರೆ ಎನ್ನುವುದನ್ನು ಕೆಲ ಕವಿತೆಗಳಲ್ಲಿ ಕಾಣಬಹುದು.

ತನ್ನ ವೃತ್ತಿಯನ್ನು ಗೌರವಿಸುತ್ತಾ ಬರವಣಿಗೆಯನ್ನು ಅಪ್ಪಿಕೊಂಡಿರುವ ಶೈಲೇಶ್‌ ಕವಿತೆಗಳಲ್ಲಿ ಭಾವನಾತ್ಮಕ ಶ್ರೀಮಂತಿಕೆ ಕಾಣಬಹುದು. ಸಾಹಿತಿಯಾಗಿ ಮಾತ್ರವಲ್ಲದೇ ರಂಗಭೂಮಿ ನಟರಾಗಿ ತಬಲವಾದನ, ಗಾಯನದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹಾರೈಸಿದರು. 

ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ: ರಾಜ್ಯ ಅಲೆಮಾರಿ ಸಮೂದಾಯಗಳ ಒಕ್ಕೂಟದ ಕಾರ್ಯಾಧ್ಯಕ್ಷ ಶೇಷಪ್ಪ ಮಾತನಾಡಿ, ಇಂದು ತಳ ಸಮುದಾಯಗಳಿಗೆ ವೇದಿಕೆ ಸಿಗುವುದೇ ವಿರಳ. ಅಂಥದ್ದರಲ್ಲಿ ದೊಂಬಿದಾಸ ಸಮುದಾಯದ ಶೈಲೇಶ್‌ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘ‌ನೀಯ. ಇಂತಹ ಪ್ರತಿಭೆಗಳಿಗೆ ಹೆಚ್ಚು ವೇದಿಕೆಗಳು ಸಿಗಬೇಕಿದೆ. ಸಮಾಜದಿಂದ ಉತ್ತಮ ಸಾಹಿತಿಗಳನ್ನು ಬೆನ್ನು ತಟ್ಟುವ ಕೆಲಸವಾಗಬೇಕಿದೆ ಎಂದರು.

ಸಂಗೀತ ವಿದ್ವಾನ್‌ ಶಿವಾಜಿರಾವ್‌, ಸಂಸ್ಕೃತಿ ಸೌರಭ ಟ್ರಸ್ಟ್‌ನ ಅಧ್ಯಕ್ಷ ರಾ.ಬಿ.ನಾಗರಾಜ್‌ ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಮಾಜಿ ಕಾರ್ಯಾದರ್ಶಿ ಕಾ.ಪ್ರಕಾಶ್‌ ನಿರೂಪಿಸಿದರು. ಶಿಕ್ಷಕ ರಾಜಶೇಖರ ಪಾಟೀಲ್‌ ವಂದಿಸಿದರು. ಕುಮಾರಿ ಸ್ವಾತಿ, ಕುಮಾರಿ ಬಿಂದುಶ್ರೀ ವೃಂದದವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿನಯ್‌ಕುಮಾರ್‌, ಡಾ.ಎಚ್‌.ವಿ.ಮೂರ್ತಿ, ಗೋಪಾಲ್‌ ಸುಗುಮ ಸಂಗೀತ ಗಾಯನ ಹಾಗೂ ವೀರಯೋಧರ ಕುರಿತು ಡಾ. ಹೆಚ್‌.ವಿ. ಮೂರ್ತಿ ರಚನೆಯ ಗೀತೆ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next