ಬೀದರ: ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಹೇಳಿದರು.
ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪಡಿಷತ್ತು, ಜಿಲ್ಲಾ ಚಿತ್ರಕಲಾ ಕಾಲೇಜುಗಳು ಮತ್ತು ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಚಿತ್ರ-ಪುಸ್ತಕ ಸಂತೆಗೆ ಚಾಲನೆ ನೀಡಿದ ಅವರು ಮಾತನಾಡಿದರು.
ಸಾಹಿತ್ಯ ಹಾಗೂ ಕಲೆ ಒಂದು ನಾಣ್ಯದ ಎರಡು ಮುಖ. ಮಹಾ ನಗರಗಳಲ್ಲಿ ನಡೆಯುವ ಪುಸ್ತಕ ಸಂತೆ ಹಾಗೂ ಚಿತ್ರ ಸಂತೆ ನಗರದಲ್ಲಿ ನಡೆದಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುವಂತಾಗಬೇಕು. ಈ ಮೂಲಕ ಸಾಹಿತ್ಯ ಹಾಗೂ ಚಿತ್ರ ಕಲಾವಿದರನ್ನು ಗೌರವಿಸುವ ಕಾರ್ಯ ಆಗಬೇಕು ಎಂದರು.
ನಾಡೋಜ ಡಾ| ಜೆ.ಎಸ್.ಖಂಡೇರಾವ್ ಮಾತನಾಡಿ, ಬೆಂಗಳೂರು ನಗರದಲ್ಲಿ ನಡೆಯುವ ಸಂತೆಗಳು ಗಡಿ ಜಿಲ್ಲೆ ಬೀದರನಲ್ಲಿ ನಡೆದಿರುವುದು ಹರ್ಷ ತಂದಿದೆ. ಈ ಸಂತೆಯಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಎನ್ನುವ ಭೇದ ಭಾವ ಇಲ್ಲ. ತಮ್ಮ ಕ್ಷೇತ್ರದಲ್ಲಿ ಹೆಚ್ಚು ಪರಿಣತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಲಾವಿದರ ನಡುವೆ ವಿಚಾರ ವಿನಿಮಯ, ಚರ್ಚೆ, ಸಂವಾದಗಳಿಗೆ ಈ ಚಿತ್ರ ಸಂತೆ ಅವಕಾಶ ಮಾಡಿಕೊಡುತ್ತದೆ. ವಿವಿಧ ಜಿಲ್ಲೆಗಳ ಕಲಾವಿದರು ಸಂತೆಯಲ್ಲಿ ಭಾಗವಹಿಸಿದ್ದು, ಜನರು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬಾಲ ಗಾಂಧಿ ವೇಷಧಾರಿಗಳ ಮೆರವಣಿಗೆ ನೋಡುಗರ ಗಮನ ಸೇಳಿಯಿತು. ನಂತರ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಚಿತ್ರಗಳನ್ನು ಬಿಡಿಸಿದರು. ಸಂತೆಯಲ್ಲಿ ಭಾಗವಹಿಸಿದ ಕಲಾವಿದರ ಚಿತ್ರಗಳು ಹಾಗೂ ಪುಸ್ತಕಗಳನ್ನು ವೀಕ್ಷಿಸಿ ಖರೀದಿಸಿದರು. ಒಟ್ಟಾರೆ ರವಿವಾರ ನಡೆದ ವಿಭಿನ್ನ ಸಂತೆ ಕಾರ್ಯಕ್ರಮಗಳು ಸಾರ್ವಜನಿಕರ ಆಕರ್ಷಣೆ ಕೇಂದ್ರವಾಗಿತ್ತು.
ಅಕ್ಕ ಅನ್ನಪೂರ್ಣ ತಾಯಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣುಕಾಂತ ಠಾಕೂರ್ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.