Advertisement

ಬಸವಣ್ಣ ನಿಂದ ಕಾವಿಗೆ ಬಂತು ಬೆಲೆ

11:06 AM Dec 26, 2017 | |

ಬಸವಕಲ್ಯಾಣ: ಗುರು ಬಸವಣ್ಣನವರಿಂದಲೆ ಕಾವಿಗೆ ಒಂದು ಬೆಲೆ ಬಂದಿದೆ. ಕಾವಿ ತೊಟ್ಟ ಜಂಗಮರಿಗೆ, ಸ್ವಾಮೀಜಿಗಳಿಗೆ
ಉತ್ಕೃಷ್ಟ ಗೌರವ ತಂದು ಕೊಟ್ಟವರು ಗುರು ಬಸವಣ್ಣನವರು. ಅವರಿಂದ ನಮಗೆ ಗೌರವ ಬಂದಿದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಚಿತ್ರದುರ್ಗದ ಜಗದ್ಗುರು ಡಾ| ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದರು.

Advertisement

ಬೇಲೂರ ಗ್ರಾಮದಲ್ಲಿ ಜಗಜ್ಯೋತಿ ಬಸವಣ್ಣನವರ ಮೂರ್ತಿ ಅನಾವರಣಗೊಳಿಸಿದ ನಂತರ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕಾವಿ ತೊಟ್ಟ ಜಂಗಮರನ್ನು ಕಂಡರೆ ಜನ ಕಾಲಿಗೆರಗಿ ಗೌರವಿಸುತ್ತಾರೆ.

ಕಾವಿ ಗೌರವ ಪಾಡಬೇಕಾದ ಕೆಲಸ ಮಠಾಧೀಶರಿಂದ ನಡೆಯಬೇಕು ಎಂದರು. ಬದುಕು ಅರಳಿಸಿಕೊಳ್ಳಲು ಬೇಕಾದ ಭಕ್ತಿಯ ಭಾವ, ಭಕ್ತಿಯ ಬೀಜವನ್ನು ಬಸವಣ್ಣನವರು ಬಿತ್ತಿ ಹೋಗಿದ್ದಾರೆ. ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಬಸವಣ್ಣನವರು ಇರುತ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. 

ಬಸವಾದಿ ಶರಣರು ಕಲ್ಯಾಣರಾಜ್ಯ ಕಟ್ಟಿದ ಪ್ರದೇಶ ಈ ನಾಡು ಎನ್ನುವುದು ಸ್ಮರಿಸಿದರೆ ರೋಮಾಂಚನವಾಗುತ್ತದೆ. ಇಲ್ಲಿಗೆ ಬರುವುದೆಂದರೆ ಎಲ್ಲಿಲ್ಲದ ಸಂತಸ ನಮ್ಮದು. ಈ ಭಾಗದಲ್ಲಿ ಒಂದು ಶಾಖೆ ತೆರೆಯಬೇಕು ಎಂದು ನಮ್ಮವರು ಒತ್ತಾಯಿಸುತ್ತಿದ್ದಾರೆ. 

ಆಯ್ತು ಅದು ಕೂಡ ಮಾಡೊಣ ಎಂದ ಶರಣರು, ಬೇಲೂರು ಐತಿಹಾಸಿಕ ಗ್ರಾಮ, ಶರಣ ಉರಿಲಿಂಗ ಪೆದ್ದಿ ಅವರು ನೆಲೆಸಿದ ಗ್ರಾಮವಿದು. ಇಲ್ಲಿ ಬಸವಣ್ಣನವರ ಭವ್ಯ ಪ್ರತಿಮೆ ಸ್ಥಾಪಿಸಿದ್ದೀರಿ. ಭಕ್ತಿ ಶ್ರದ್ಧೆಯಿಂದ ಜನ ಸೇರಿದ್ದಿರಿ, ಇದು ನೀವು ಬಸವಣ್ಣನವರ ಮೇಲಿಟ್ಟಿರುವ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.

Advertisement

ವಿಜಯಪುರದ ಶ್ರೀ ಯೋಗೀಶ್ವರಿ ತಾಯಿ ಆಶೀರ್ವಚನ ನೀಡಿದರು. ಬೇಲೂರ ವಿರಕ್ತ ಮಠದ ಶಿವಕುಮಾರ ಸ್ವಾಮಿಜಿ ನೇತೃತ್ವ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ, ಬಿಜೆಪಿ ಪ್ರಮುಖ ಸಂಜಯ ಪಟವಾರಿ ಮಾತನಾಡಿದರು. ಮುಖಂಡ ಜಗನ್ನಾಥ ಚಿಲ್ಲಾಬಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಯಗಾಂವದ ಶ್ರೀ ಶಿವಾನಂದ ಸ್ವಾಮಿಜಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಗುರುಮಠಕಲ್‌ ನ ಶ್ರೀಗಳು, ಮಾಜಿ ಶಾಸಕ ಎಂ.ಜಿ. ಮುಳೆ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಶಂಕರ ನಾಗದೆ ಉಪಸ್ಥಿತರಿದ್ದರು. ರಾಮಲಿಂಗ ಸಾಗಾವೆ ಸ್ವಾಗತಿಸಿದರು. ಬಸವರಾಜ ಗುಂಗೆ ನಿರೂಪಿಸಿದರು.

ಬೇಲೂರ ಗ್ರಾಮದಲ್ಲಿ ಸಮಾನತೆಯ ಹರಿಕಾರ ಬಸವಣ್ಣನವರ ಮೂರ್ತಿ ಅನಾವರಣೆಗೊಂಡಿದ್ದು ಹೆಮ್ಮೆಯ ವಿಷಯ. ಮೂರ್ತಿ ಪ್ರತಿಷ್ಟಾಪಿಸಿದರೆ ಸಾಲದು ನಿತ್ಯ ಜೀವನದಲ್ಲಿ ಬಸವಣ್ಣನವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಆಚರಣೆಗೆ ತರಬೇಕು. ಅಂದಾಗ ಮಾತ್ರ ಮೂರ್ತಿ ಸ್ಥಾಪಿಸಿದ್ದಕ್ಕೆ ಮಹತ್ವ ಬರುತ್ತದೆ.
ಹುಲಸೂರು ಡಾ| ಶಿವಾನಂದ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next