Advertisement

ಕಲೆ, ಸಾಹಿತ್ಯದಿಂದ ನೆಮ್ಮದಿ

12:36 PM Oct 14, 2018 | |

ಬೆಂಗಳೂರು: ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿಯಿಂದ ನಿರಂತರ ಶಾಂತಿ, ನೆಮ್ಮದಿ, ಸೌಹಾರ್ದತೆ ಕಾಯ್ದುಕೊಳ್ಳಲು ಸಾಧ್ಯ ಎಂದು ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

Advertisement

ಡಾ.ಸಿ.ಸೋಮಶೇಖರ್‌-ಎನ್‌.ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನದಿಂದ ಶನಿವಾರ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲರ ಮೇಲಿದೆ. ಭಾರತೀಯ ಸಂಗೀತ ಪ್ರಕಾರ ಸೇರಿದಂತೆ ಶಾಸ್ತ್ರೀಯ ಸಾಹಿತ್ಯ ಚೌಕಟ್ಟಿನಲ್ಲಿ ಶಾಂತಿ, ನೆಮ್ಮದಿ ಗಳಿಸಬಹುದು ಎಂದು ತಿಳಿಸಿದರು.

ಪಾಶ್ಚಿಮಾತ್ಯ ಸಂಗೀತ ವಿಜೃಂಭಿಸುತ್ತದೆ. ಆ ಸಂಗೀತ ಕಾರ್ಯಕ್ರಮ ಮುಗಿದ ನಂತರ ಅದರ ಛಾಯೆ ಉಳಿಯುವುದಿಲ್ಲ. ಆದರೆ, ಭಾರತೀಯ ಸಂಗೀತ ಹಾಗಲ್ಲ. ಭಾವ, ರಾಗಗಳ ಸಮ್ಮಿಲನವಾಗಿದೆ. ಅನೇಕ ಸಂದರ್ಭಗಳಲ್ಲಿ ಸಂಗೀತದಲ್ಲಿ ಸಾಹಿತ್ಯ ಗೌಣವಾಗುತ್ತದೆ. ಗಾಯಕ ವಿದ್ಯಾಭೂಷಣರು ತಮ್ಮ ಗಾಯನದಲ್ಲಿ ಸಾಹಿತ್ಯ ಮತ್ತು ಸಂಗೀತದ ಸಮತೋಲಿತನ ಕಾಯ್ದುಕೊಳ್ಳುತ್ತಾರೆ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ. ಹುಟ್ಟಿದ ಊರು, ಜನ್ಮ ನೀಡಿ ತಂದೆ, ತಾಯಿ, ಓದಿದ ವಿದ್ಯಾಸಂಸ್ಥೆಯನ್ನು ಎಂದೂ ಮರೆಯಬಾರದು. ಇಂದು ಪಾಲಕ-ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಾರೆ. ಹಣ, ಅಧಿಕಾರ ಗಳಿಸಬೇಕು ಎಂದು ಬಯಸುತ್ತಾರೆ. ಆದರೆ, ಮಾನವೀಯ ಮೌಲ್ಯಗಳನ್ನು ಕಲಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಶಸ್ತಿಗಳ ಆಯ್ಕೆ ವಿಚಾರದಲ್ಲಿ ಸಾಕಷ್ಟು ಪಾರದರ್ಶಕವಾಗಿರುವ ಪ್ರತಿಷ್ಠಾನ, ಅರ್ಹರನ್ನೇ ಆಯ್ಕೆ ಮಾಡಿದೆ. ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾರೆ. ಆ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಈಗಾಗಲೇ 20ರಿಂದ 25 ಅರ್ಜಿಗಳು ಬಂದಿವೆ. ಪ್ರಶಸ್ತಿ ಪ್ರದಾನದ ನಂತರ ಪಡೆದವರಿಗೆ ಮತ್ತು ಕೊಟ್ಟವರಿಗೆ ಸಂಬಂಧವೇ ಇಲ್ಲದಾಗುತ್ತದೆ ಎಂದು ಟೀಕಿಸಿದರು. ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉಪಸ್ಥಿತರಿದ್ದರು.

Advertisement

ನಾಲ್ವರಿಗೆ ಜೀವಮಾನ ಸಾಧನೆ ಪ್ರಶಸ್ತಿ: ವಚನ ಸಾಹಿತ್ಯ ಕ್ಷೇತ್ರದಿಂದ ಡಾ.ವೀರಣ್ಣ ರಾಜೂರ, ಜನಪದ ಕ್ಷೇತ್ರದಿಂದ ಡಾ.ಪಿ.ಕೆ.ರಾಜಶೇಖರ್‌, ದಾಸ ಸಾಹಿತ್ಯ ಕ್ಷೇತ್ರದಿಂದ ಡಾ. ವಿದ್ಯಾಭೂಷಣ, ಸಂಗೀತ ಕ್ಷೇತ್ರದಿಂದ ಡಾ. ಎಂ.ವೆಂಕಟೇಶ್‌ ಕುಮಾರ್‌ ಅವರಿಗೆ ಜೀವನ ಸಾಧನೆಗಾಗಿ ಪ್ರತಿಷ್ಠಾನದ ವತಿಯಿಂದ ಸಂಸ್ಕೃತಿ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next