ಬಳ್ಳಾರಿ: ಭಾರತ ದೇಶ ಕಲೆ ಮತ್ತು ಸಂಸ್ಕೃತಿಯ ಪ್ರತೀಕ. ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಪರಂಪರೆಯ ನಿರಂತರತೆಯನ್ನು ಕಾಪಾಡಬೇಕು ಎಂದು ವಿಶ್ವ ವಿಖ್ಯಾತ ತೊಗಲುಬೊಂಬೆ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ ಹೇಳಿದರು.
ನಗರದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಕಲಬುರಗಿ ವಿಭಾಗೀಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಗಂಡು ಮೆಟ್ಟಿದ ಸ್ಥಳ. ಇಲ್ಲಿನ ಬಯಲಾಟ, ತೊಗಲು ಬೊಂಬೆಯಾಟ ಸೇರಿದಂತೆ ವೈವಿಧ್ಯಮಯ ಕಲಾ ಪ್ರಾಕಾರಗಳು ದೇಶ-ವಿದೇಶಗಳಲ್ಲಿ ಪ್ರಖ್ಯಾತವಾಗಿವೆ. ಸಾವಿರಾರು ಕಲಾವಿದರು ಈ ಮಣ್ಣಲ್ಲಿ ಅರಳಿದ್ದಾರೆ ಎಂದರು.
ಇಂತಹ ಭವ್ಯ ಸಾಂಸ್ಕೃತಿಕ ಪರಂಪರೆಯ ವಾರಸುದಾರರಾಗಿರುವ ಇಂದಿನ ವಿದ್ಯಾರ್ಥಿಗಳು ಈ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವುದರ ಜೊತೆಗೆ ದೇಶದ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಬೇಕು. ಅಂತಹ ಮಟ್ಟಕ್ಕೆ ನಮ್ಮ ವಿದ್ಯಾರ್ಥಿಗಳು ಬೆಳೆಯಲಿ ಎಂದು ಹಾರೈಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಅಬ್ದುಲ್ ರಶೀದ್ ಮಾತನಾಡಿ, ಇಂದಿನ ಶಿಕ್ಷಣ ಕ್ರಮ ಅಂಕ ಆಧಾರಿತ ಪದ್ಧತಿಯಾಗಿ ರೂಪುಗೊಳ್ಳುತ್ತಿದೆ. ವಿದ್ಯಾರ್ಥಿಗಳು ಅಂಕ ಗಳಿಕೆಯನ್ನೇ ಗುರಿಯಾಗಿಸಿಕೊಳ್ಳದೇ ದೇಶದ ಸಂಸ್ಕೃತಿ, ಕಲೆಗಳನ್ನು ಕಲಿತು ಅವುಗಳನ್ನು ಪೋಷಿಸಬೇಕು. ಇಂತಹ ಕಾರ್ಯಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರೋತ್ಸಾಹಿಸುತ್ತದೆ ಎಂದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಪಿಯು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಪಂ ಹಂಗಾಮಿ ಅಧ್ಯಕ್ಷೆ ದೀನಾ ಮಂಜುನಾಥ, ಕವಯತ್ರಿ ಎ.ಎಂ. ಜಯಶ್ರೀ, ಡಿಡಿಪಿಯು ಬಿ.ಆರ್. ನಾಗರಾಜಪ್ಪ, ಬಳ್ಳಾರಿ ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜೆ. ಪ್ರಸಾದ್ ರೆಡ್ಡಿ, ಶ್ರೀ ಚೈತನ್ಯ ಪಪೂ ಕಾಲೇಜಿನ ಡೀನ್ ಪ್ರಸನ್ನಾಂಜನೇಯಲು, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಗೆದ್ದು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು. ಪಾರ್ವತಿ ಪ್ರಾರ್ಥನೆ, ನಯನ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಡಾ| ನಿಂಗಪ್ಪ ವಿ.ಹೊಸಳ್ಳಿ ಸ್ವಾಗತಿಸಿದರು.
ಉತ್ತರ ಕರ್ನಾಟಕ ಗಂಡು ಮೆಟ್ಟಿದ ಸ್ಥಳ. ಇಲ್ಲಿನ ಬಯಲಾಟ, ತೊಗಲು ಬೊಂಬೆಯಾಟ ಸೇರಿದಂತೆ ವೈವಿಧ್ಯಮಯ ಕಲಾ ಪ್ರಾಕಾರಗಳು ದೇಶ-ವಿದೇಶಗಳಲ್ಲಿ ಪ್ರಖ್ಯಾತವಾಗಿವೆ. ಸಾವಿರಾರು ಕಲಾವಿದರು ಈ ಮಣ್ಣಲ್ಲಿ ಅರಳಿದ್ದಾರೆ.
ನಾಡೋಜ ಬೆಳಗಲ್ಲು ವೀರಣ್ಣ