Advertisement
ಈ ಸುದ್ದಿ ಓದಿ ನನಗೆ ಕೆಲವು ವರ್ಷಗಳ ಕೆಳಗೆ ನ್ಯೂಯಾರ್ಕಿನ ಗುಗೆನ್‌ಹ್ಯಾಮ್ ಮ್ಯೂಸಿಯಮ್ಮಿನಲ್ಲಿ ನೋಡಿದ ಮಿನಿಮಲಿಸಮ್ (ಕನಿಷ್ಠತೆ) ಕಲಾಪ್ರದರ್ಶನದ ನೆನಪಾಯಿತು. ಪಾಶ್ಚಾತ್ಯ ಚಿತ್ರ ಮತ್ತು ಶಿಲ್ಪಕಲೆಗಳು ಜನಪದದಿಂದ, ಶಾಸ್ತ್ರೀಯ, ಅಲ್ಲಿಂದ ಇಂಪ್ರಶ್ಶನಿಸಮ್, ಆಮೇಲೆ, ಅಬ್‌ಸ್ಟ್ರೇಕ್ಟ್, ಸರ್ರಿಯಲಿಸ್¾, ಪಾಪ್- ಹೀಗೆಲ್ಲ ಅಲೆಯುತ್ತಿದ್ದಾಗ, ದಾರಿಯಲ್ಲಿಯ ಒಂದು ಮೈಲುಗಲ್ಲು ಕನಿಷ್ಠತೆ. ಚಿತ್ರಕಲೆಯ ಬಗ್ಗೆ ನಮಗಿದ್ದ ಕಲ್ಪನೆಯನ್ನೇ ಬುಡಮೇಲು ಮಾಡುವಂಥ ಶುದ್ಧ ಸ್ವಂತಿಕೆಯ, ಹೊಚ್ಚಹೊಸ ಕಲ್ಪನೆಯ, ಬೆರಗು ಮೂಡಿಸುವಂಥ ಕಲಾರಚನೆಗಳು ಅಲ್ಲಿದ್ದವು.
Related Articles
Advertisement
ಒಂದು ಕೋಣೆಗೆ ಹೊಕ್ಕು ಎಲ್ಲೆಲ್ಲಿ ದೃಷ್ಟಿ ಹಾಯಿಸಿದರೂ ಯಾವುದೇ ಕಲಾಕೃತಿ ಕಣ್ಣಿಗೆ ಬೀಳಲಿಲ್ಲ. ಬಹುಶಃ ಅಲ್ಲಿ ಏನನ್ನಾದರೂ ಇಡಲು ಮರೆತಿರಬೇಕು ಎಂದುಕೊಳ್ಳುವಾಗ, ಮೂಲೆಯಲ್ಲಿ ಖಾಲಿ ಕಾಗದದ ಹಾಳೆಗಳ ಒಂದು ಅಟ್ಟಿ. “ಈ ಅಟ್ಟಿಯಿಂದ ಒಂದು ಕಾಗದವನ್ನು ತೆಗೆದುಕೊಂಡು ಹೋಗಿ’ ಎಂಬ ಬಿನ್ನಹ. ಅದನ್ನೂ ಶಿರಸಾವಹಿಸಿದೆವು. ಕಲಾಭಿಮಾನಿಗಳು ಇಂತಹ ಕಲಾಕೃತಿಗಳಲ್ಲಿ ಪಾಲ್ಗೊಂಡಾಗಷ್ಟೇ ಅವು ಅರ್ಥಪೂರ್ಣವಾಗುವವೇನೋ.
ಕೆಲವು ಕಲಾಕೃತಿಗಳಲ್ಲಿ ಕಲೆಯ ಕಲ್ಪನೆಯು ಕಲಾಕಾರನದಾದರೂ, ಅದನ್ನು ರೂಪಿಸುವವನು ಸ್ಟುಡಿಯೋದ ಕೆಲಸಗಾರನಂತೆ. ಅಂದರೆ ಇಲ್ಲಿನ ರಚನೆಯ ಕನಿಷ್ಟತೆ ಎಷ್ಟೆಂದರೆ ಕಲಾವಿದನ ಕೈಯ ಸೋಂಕೂ ಅಲ್ಲಿರಬಾರದಂತೆ. ಮಿನಿಮಲಿಸಮ್ ಸಾರುವುದೇ ನಿರಾಕರಣೆಯ ತತ್ವವನ್ನು, – ಕಲಾವಿದನ ಕೈಯ ನಿರಾಕರಣೆಯಿಂದ ಆರಂಭವಾಗಿ ಕಲೆಯ ಅರ್ಥವನ್ನೇ ತ್ಯಜಿಸುವಲ್ಲಿಯವರೆಗೂ ಅದು ಹೋಗಿದೆ.
ವಾಶ್‌ಬೇಸಿನ್, ಕಮೋಡ್ ಇತ್ಯಾದಿಗಳನ್ನು ಜೋಡಿಸಿಟ್ಟ ಕೋಣೆಯನ್ನು ನಾವು ಬಚ್ಚಲುಮನೆ ಯೆಂದೇ ಭಾವಿಸಿ ಬೇಸ್ತು ಬಿದ್ದುದು ಇನ್ನೊಂದು ಕತೆ. ಅಂತೂ ಯಾವೊಂದು ವಸ್ತುವನ್ನೂ ಕಲಾಕೃತಿಯೆಂದು ಸಾರುವ ಮನಸ್ಸು ಮುಖ್ಯವೆಂದು ಆಗ ತಿಳಿಯಿತು. ಒಂದು ಗೋಡೆಯಿಡೀ ಗ್ರಾಫ್ ಪುಸ್ತಕದಲ್ಲಿರುವಂತೆ ಕೆಂಪು-ಬಿಳಿ ಚೌಕುಳಿಗಳು. ಅಲ್ಲೇ ಮುಂದೆ, ಕಪ್ಪು ವರ್ತುಲಗಳು ಮತ್ತು ಹಳದಿ-ನೀಲಿ ಕಮಾನುಗಳ ನಡುವೆ ಕೆಂಪು ಚೌಕಗಳ ವಿದ್ಯುತ್ ವಲಯದ ರೇಖಾಜಾಲ. ಆ ಜಾಲದಲ್ಲಿ ಸಿಕ್ಕಿಬಿದ್ದ ಕಣ್ಣುಗಳು ಪುನಃ ಯಥಾಸ್ಥಿತಿಗೆ ಮರಳಬೇಕಾದರೆ, ಸಾಕಷ್ಟು ರೆಪ್ಪೆ ಬಡಿದು, ಕಣ್ಣುಜ್ಜಿಕೊಳ್ಳಬೇಕಾಯಿತು.
ಸ್ಟೀಲ್ ತಟ್ಟೆಗಳು. ಇಟ್ಟಿಗೆಗಳ ರಾಶಿ. ಮರದ ಪೆಟ್ಟಿಗೆಗಳು. ಉದ್ದಕ್ಕೂ ಅಡ್ಡಕ್ಕೂ ಇಡಲಾದ ಎರಡು-ಮೂರು ಟ್ಯೂಬ್‌ಲೈಟುಗಳೂ. ಇಲ್ಲಿನ ಈ ರಚನೆಗಳನ್ನು ನೋಡಲು ಹೆಚ್ಚು ಹೊತ್ತು ಹಿಡಿಯಲಿಲ್ಲವೇನೋ ಹೌದು, ಆದರೆ ಇದರ ಅರ್ಥ ಏನಿರಬಹುದೆಂದು ತಲೆಕೆಡಿಸಿಕೊಳ್ಳುವುದರಲ್ಲೇ ಸಮಯ ವ್ಯಯವಾದದ್ದು ಮಾತ್ರ ಸುಳ್ಳಲ್ಲ. ಮ್ಯೂಸಿಯಮ್ಮಿನ ಏಳನೆಯ ಮಜಲನ್ನು ತಲಪುವ ಹೊತ್ತಿಗೆ ಏನನ್ನೇ ಆದರೂ ಕಲೆಯೆಂದು ಸ್ವೀಕರಿಸುವ ಸ್ಥಿತಿಯಲ್ಲಿದ್ದೆವು. ನೆಲದ ಮೇಲೆ ಕೆಲವು ನೊಣಗಳು ಸತ್ತು ಬಿದ್ದದ್ದು ಕಣ್ಣಿಗೆ ಬಿದ್ದಾಗ ಅದರಲ್ಲೂ ಕಲೆಯನ್ನು ಕಂಡ ಭ್ರಮೆಯಾಯಿತು. “ಛೆ! ಛೆ! ಕಲೆಗಾಗಿ ಈ ನೊಣಗಳು ಜೀವ ತೆತ್ತಿವೆಯಲ್ಲ’ ಎಂದು ಸಂತಾಪಸೂಚಿಸಿ, ಆ ಕಲಾಕೃತಿಗೆ ನೊಣಗಳ ಹೆಣಗಳು ಎಂಬ ಶೀರ್ಷಿಕೆಯನ್ನು ಕೊಟ್ಟೆವು. ಮಿನಿಮಲಿಸಮ್‌ಗೆ ಯಾಕಿಷ್ಟು ಗೇಲಿ ಮಾಡಿದೆವೆಂದು ಪರಿತಪಿಸುವಷ್ಟರಲ್ಲಿ ಸತ್ತನೊಣಗಳು ಗೋಡೆಯ ಮೇಲೆ ತೂಗಿಸಿದ್ದ ಚಿತ್ರದಿಂದ ಉದುರುತ್ತಿವೆಯೇ ಎಂಬ ಸಂಶಯ ತಲೆದೋರಿತು. ಹೌದು. ಸಾವಿರಾರು ನೊಣಗಳ ಕಳೇಬರಗಳನ್ನು ಕ್ಯಾನ್ವಾಸಿನ ಮೇಲೆ ಮುತುವರ್ಜಿ ವಹಿಸಿ, ಅಂಟಿಸಲಾಗಿದ್ದು, ಅದೇ ಒಂದು ಕಲಾಕೃತಿಯಾಗಿತ್ತು! ಕೆಲವು ಕಳೇಬರಗಳು ಕ್ಯಾನ್ವಾಸಿನಿಂದ ಹೊರಬಿದ್ದು ಸ್ವಾತಂತ್ರ್ಯ ಪಡೆದಿದ್ದವಷ್ಟೆ.
ನಮ್ಮಲ್ಲೂ ಖ್ಯಾತ ಕಲಾವಿದ ಎಮ್. ಎಫ್. ಹುಸೇನರು ಒಮ್ಮೆ ಕೊಲ್ಕತಾದಲ್ಲಿ ಒಂದೇ ಒಂದು ಗೆರೆಯನ್ನೂ ಎಳೆಯದೆ ಬರೇ ಬಿಳೀ ಬಟ್ಟೆಯನ್ನು ಕೋಣೆ ತುಂಬ ಕಟ್ಟಿ ಕಲೆಯೆಂದು ಕರೆದು ಸೈ ಎನಿಸಿಕೊಂಡದ್ದನ್ನು ನೆನಪುಮಾಡಿಕೊಳ್ಳಬಹುದು. ಬಾಂದ್ರಾದಲ್ಲಿ ಏರ್ಪಡಿಸಿದ್ದ ಲಂಡನ್ನಿನ ಕಲಾವಿದ ಆಶಿಶ್ ಕಪೂರರ ಕಲಾತ್ಮಕ ರಚನೆ ಭಯೋತ್ಪಾದನೆಯ ಬಗ್ಗೆ ಹೇಳಬೇಕೆಂದೆನಿಸುತ್ತದೆ. ಎರಡು ಗೋಡೆಗಳು ಸೇರುವ ಮೂಲೆಗೆದುರಾಗಿ ಇಟ್ಟಿದ್ದ ಫಿರಂಗಿಯ ತೋಪಿಗೆ ಐದು ನಿಮಿಷಗಳಿಗೊಮ್ಮೆ ಕೆಂಪು ಬಣ್ಣದ ಹೆಟ್ಟೆಯನ್ನು ತುಂಬಿಸಿ “ಢಮಾರ್’ ಎಂದು ತುಪಾಕಿ ಸಿಡಿಸುತ್ತಿದ್ದರು. ಆ ಕೆಂಪು ಬಣ್ಣವೆಂಬುದು ಮೂಲೆಗೆ ಹೋಗಿ ರಟ್ಟಿ ಗೋಡೆಗೊಂದಿಷ್ಟು, ನೆಲಕ್ಕೊಂದಿಷ್ಟು ಬಿದ್ದು ಜಾಗವಿಡೀ ರಕ್ತಮಯವಾದಂತೆ ಕಾಣುತ್ತಿತ್ತು.
ಚಿತ್ರಕಲೆಯಲ್ಲಿ ಅಮೂರ್ತ (abstract) ಅಭಿವ್ಯಕ್ತಿಯ ಭಾವನಾತ್ಮಕತೆಯ ಆರ್ಭಟದ ನಂತರ ಬಂದ ಈ ಕನಿಷ್ಟ ಕಲೆಯ ವೈಶಿಷ್ಟ್ಯವೆಂದರೆ ವಿಪರೀತ ಸರಳತೆ ಮತ್ತು ಅಕ್ಷರಶಃ ವಸ್ತುನಿಷ್ಟ ದೃಷ್ಟಿ. ನೋಡಿದ್ದೇ ಅರ್ಥ, ನೋಡಿದಷ್ಟೇ ಅರ್ಥ! ಈ ಕನಿಷ್ಟತೆಯ ಕಲ್ಪನೆಯು ಸಂಗೀತ, ಸಾಹಿತ್ಯ, ವಿನ್ಯಾಸ, ವಾಸ್ತುಶಿಲ್ಪಗಳವರೆಗೂ ಬಂದು ಬದುಕನ್ನೂ ಪ್ರಭಾವಿಸಿದೆ.
ಅದೇ – ಅನಗತ್ಯ ವಸ್ತುಗಳಿಂದ ಬಿಡುಗಡೆ ಹೊಂದಿದ ಹಿತಮಿತವಾದ ಅತಿ ಸರಳ ಜೀವನವಿಧಾನ.
ಮಿತ್ರಾ ವೆಂಕಟ್ರಾಜ್