ಶಿವಮೊಗ್ಗ: ಕಲಿಯುಗ ಪರ್ವಕಾಲವಾಗಿದ್ದು, ಇಂತಹ ಕಾಲಘಟ್ಟದಲ್ಲೂ ರಾಮಾಯಣ, ಮಹಾಭಾರತ ಇಂದಿಗೂ ಪ್ರಸ್ತುತವಾಗಿದೆ. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಸಂಕೀರ್ಣ ಕಾಲಘಟ್ಟದಲ್ಲಿದೆ. ಆದ್ದರಿಂದ ಗಮಕ ಸೇರಿದಂತೆ ನಾಡಿನ ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸಲು ನಾವೆಲ್ಲಾ ಪ್ರಯತ್ನಿಸಬೇಕಾಗಿದೆ ಎಂದು ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ| ಎಂ.ಆರ್.ಎನ್. ಮೂರ್ತಿ ಹೇಳಿದರು.
ಗಮಕ ಕಲಾ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗಮಕ ಗ್ರಾಮವಾದ ತಾಲೂಕಿನ ಹೊಸಹಳ್ಳಿಯ ಗಮಕ ಭವನದಲ್ಲಿ ಭಾನುವಾರ ನಡೆದ 40ನೇ ವಾರ್ಷಿಕ ಗಮಕ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾರಂಪರಿಕತೆಯ ಜೊತೆ-ಜೊತೆಗೆ ಅಧುನಿಕ ಸಂವಹನ ಮಾಧ್ಯಮಗಳನ್ನು ಬಳಿಸಿಕೊಂಡು ಗಮಕ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸಿಬೇಕಾಗಿದೆ. ಇಂತಹ ಅತಿ ದೊಡ್ಡ ಜವಾಬ್ದಾರಿ ನಮ್ಮೆಲರ ಮೇಲಿದೆ. ಈ ಜವಾಬ್ದಾರಿಯನ್ನು ನಾವು ಸಮರ್ಪಕವಾಗಿ ನಿರ್ವಹಿಸುವ ಮೂಲಕ ನಾಡಿನ ಕಲಾ ಪರಂಪರೆಗೆ ಕೊಡುಗೆ ನೀಡಬೇಕಿದೆ ಎಂದರು.
ಮಾಹಿತಿ ತಂತ್ರಜ್ಞಾನದ ದಾಳಿಯಿಂದಾಗಿ ಇಂದಿನ ಯುವ ಪೀಳಿಗೆಯಲ್ಲಿ ಕಲಾಸಕ್ತಿ ಹೋಗುತ್ತಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಐಟಿ ಕ್ಷೇತ್ರದಲ್ಲಿ ಕೈತುಂಬ ಸಂಪಾದನೆಯ ಕೆಲಸ ದೊರೆಯುತ್ತದೆ. ಆದರೆ ಕೇವಲ ಹಣ ಸಂಪಾದನೆ ಅಷ್ಟೇ, ಶ್ರೀಮಂತಿಕೆ ಅಲ್ಲ. ಕಲಾಸಕ್ತಿಯಲ್ಲೂ ಕೂಡ ಶ್ರೀಮಂತಿಕೆ ಮೆರೆದಾಗ ಮಾತ್ರ ಸಂಪೂರ್ಣ ವ್ಯಕ್ತಿತ್ವ ರೂಪಿಸಿಕೊಳಲು ಹಾಗೂ ರೂಢಿಸಿಕೊಳ್ಳಲು ಸಾಧ್ಯ. ನಾವು ಯಾವುದೇ ಕಾರಣಕ್ಕೂ ನಮ್ಮತನವನ್ನು ಕಳೆದುಕೊಳ್ಳಬಾರದು. ಅಲ್ಲದೆ ಕಲೆಯನ್ನು ಕೂಡ ಅಳಿಯಲು ಬಿಡಬಾರದು ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಮೈಸೂರಿನ ಖ್ಯಾತ ವಿದ್ವಾಂಸ ಡಾ| ಟಿ.ವಿ. ವೆಂಕಟಾಚಲ ಶಾಸ್ತ್ರಿ, ಕಾವ್ಯ ಬರೆಯುವಾಗ ಕವಿ ಛಂದಸ್ಸನ್ನು ಬಳಕೆ ಮಾಡಿರುತ್ತಾನೆ. ಛಂದಸ್ಸಿನ ಬಳಕೆಗೆ ಉದ್ದೇಶವಿರುತ್ತದೆ. ಗಮಕ ವಾಚನಕಾರರು ಛಂದಸ್ಸನ್ನು ಓದಿ ವ್ಯಾಖ್ಯಾನಿಸಬೇಕು. ಆಗ ಛಂದಸ್ಸಿನ ಬಗ್ಗೆ ತಿಳುವಳಿಕೆ ಬರುತ್ತದೆ. ಗಮಕ ಕಲೆಯಲ್ಲಿ ಇಂತಹ ಪ್ರಯೋಗ ಆಗಬೇಕೆಂದು ಆಶಿಸಿದರು.
ಇದೆ ಸಂದರ್ಭದಲ್ಲಿ ಖ್ಯಾತ ಗಮಕಿ ಬೆಂಗಳೂರಿನ ಶ್ರೀಮತಿ ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ಕೀರ್ತಿಶೇಷ ಸೂರ್ಯನಾರಾಯಣ ಅವಧಾನಿ ಸ್ಮಾರಕ ಗಮಕವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮಹಿಮಾ ಕಶ‌್ಯಪ್, ದ್ವೀತಿಯ ಬಹುಮಾನ ಪಡೆದ ಪ್ರಸಾದ್ ಮತ್ತು ಸುಷ್ಮಿತ ಅವರಿಗೆ ಬಹುಮಾನ ವಿತರಿಸಲಾಯಿತು.
ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಎಚ್.ಎಸ್. ಗೋಪಾಲ್, ರಾಜರಾಮ್ ಮೂರ್ತಿ ಇದ್ದರು. ಎಸ್. ನಾಗರಾಜ್ ನಿರೂಪಿಸಿದರು. ಡಾ| ವೆಂಕಟೇಶಮೂರ್ತಿ ವಂದಿಸಿದರು.