ಚಿತ್ತಾರ ಎಂದರೆ ಅದನ್ನು ಗೋಡೆಯ ಮೇಲೆ ಮಾತ್ರ ಬಿಡಿಸಬೇಕಿಲ್ಲ. ಬಾಟಲಿಯ ಮೇಲೂ ಮೂಡಿಸಬಹುದು. ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಯುವಕನ ಹೆಸರು ನಾರಾಯಣ ತೊರವಿ. ಇವರು ಮೂಲತಃ ವಿಜಯಪುರ ಜಿಲ್ಲೆಯ ತೊರವಿ ಗ್ರಾಮದವರು. ನಾಲ್ಕನೇ ತರಗತಿಯಲ್ಲಿಯೇ ಚಿತ್ತಾರದ ಕಲೆಯೆಡೆಗೆ ಆಕರ್ಷಿತರಾದವರು. ನಿತ್ಯವೂ ಬೆಳಗ್ಗೆ ಮನೆ ಮುಂದೆ ಅಮ್ಮ ಬಿಡಿಸುತ್ತಿದ್ದ ರಂಗೋಲಿಯಿಂದ ಸ್ಫೂರ್ತಿ ಪಡೆದ ನಾರಾಯಣ, ಪರಿಚಿತರ ಮನೆಗೆ ಹೋದಾಗ ಅಲ್ಲಿ ಕಣ್ಣಿಗೆ ಬೀಳುವ ಚಿತ್ತಾರದ ಕಲೆಗಳನ್ನು ಕಣ್ತುಂಬಿಕೊಂಡು ಮನೆಗೆ ವಾಪಸಾಗುತ್ತಿದ್ದರು. ಮನೆಯಲ್ಲಿ ಅದೇ ರೀತಿ ಚಿತ್ರ ಮೂಡಿಸಲು ಮುಂದಾಗುತ್ತಿದ್ದರು. ವಿಶೇಷವಾಗಿ, ಯಾರಿಗೂ ಬೇಡವಾದ ವಸ್ತುಗಳೆಂದರೆ ನಾರಾಯಣನಿಗೆ ಎಲ್ಲಿಲ್ಲದ ಪ್ರೀತಿ. ಬೇಡವಾದ ವಸ್ತುಗಳನ್ನು ಬೇಕು ಅಂತಲೇ ಸಂಗ್ರಹಿಸಿ, ಮನೆಯಲ್ಲಿ ಬೈಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ. ಹರಿದ ಬಟ್ಟೆಯಾಗಲೀ, ಖಾಲಿ ಬಾಟಲಿಯಾಗಲೀ, ಸುಂದರ ಚಿತ್ರವಿರುವ ರದ್ದಿಯಾಗಲೀ ಎಲ್ಲವನ್ನೂ ಆಯ್ದುಕೊಂಡು ತಮ್ಮ ಕೋಣೆಗೆ ತುಂಬಿಸಿಕೊಳ್ಳುವ ಉದಾರತೆ ಇವರದ್ದು.
ಬಿಎಫ್ಎ, ಎಂ.ಎ. ಟೂರಿಸಂ ಓದಿಕೊಂಡಿರುವ ಇವರು, ಶಾಲಾ-ಕಾಲೇಜು ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಮನೆ ಮುಂದೆ ಸಸಿ ಬೆಳೆಸಲು ಜಾಗ ಇಲ್ಲದವರು ಬಾಟಲಿಗೆ ನೀರು ಹಾಕಿ ಸಸಿ ಬೆಳೆಸುವುದನ್ನ ನೋಡಿದ ನಾರಾಯಣ, ಖಾಲಿ ಬಾಟಲಿಗೆ ಏಕೆ ಸೌಂದರ್ಯ ತುಂಬಬಾರದು ಎಂದು ಆಲೋಚಿಸಿ, ಗೆಳೆಯರ ಬಳಿ ಖಾಲಿ ಬಾಟಲಿ ಕೇಳಿದಾಗ ಗೇಲಿ ಮಾಡಿದವರೇ ಹೆಚ್ಚು.
ಯಾರು ಏನೇ ಅಂದರೂ, ಆಡಿಕೊಂಡರೂ, ಬೇಸರಿಸದೆ, ಅಗತ್ಯವಿದ್ದಷ್ಟು ಬಾಟಲಿಗಳನ್ನು ಹೇಗೋ ಸಂಗ್ರಹಿಸಿ ಸೆಣಬು, ಅಂಟು, ಗಾಜಿನ ಚೂರು, ಬೆಂಡು, ಇತರ ಸಾಮಗ್ರಿಗಳಿಂದ ಖಾಲಿ ಬಾಟಲಿಗೆ ಕಲೆಯ ಮೂಲಕ ಹೊಸ ರೂಪ ಕೊಟ್ಟಿದ್ದಾರೆ. ಈಗ ಇವರ ಮನೆಯಲ್ಲಿ ಹತ್ತಾರು ಖಾಲಿ ಬಾಟಲಿಗಳು ಅರಳಿ ನಿಂತು ಸದ್ದು ಮಾಡುತ್ತಿವೆ.
ಒಂದು ಬಾಟಲಿ ಮೇಲೆ ಕಲೆ ಮೂಡಿಸಲು ತಗುಲುವ ವೆಚ್ಚ 35-40 ರೂಪಾಯಿಗಳು. ಕಲೆ ತುಂಬಿಕೊಂಡ ಬಾಟಲಿಯನ್ನ ನೂರಾರು ರೂಪಾಯಿ ಕೊಟ್ಟು ಖರೀದಿಸಲು ಹಲವರು ಮುಂದೆ ಬಂದಿದ್ದಾರೆ. ಖರೀದಿಸಲು ಮುಂದಾದವರಿಗೆ ನಾರಾಯಣ ಅವರು ಹೇಳ್ಳೋದಿಷ್ಟು: ಇದು ಕಸದಿಂದ ತೆಗೆದ ರಸ. ದಯವಿಟ್ಟು ಇದನ್ನು ಕಸದ ಬುಟ್ಟಿಗೆ ಸೇರಿಸಬೇಡಿ. ಸಸಿ ಬೆಳವಣಿಗೆಗೆ ಸಹಕಾರ ನೀಡುವ ಮೂಲಕ ನಮ್ಮನ್ನೂ ಬೆಳೆಸಿ…
ಚಿತ್ರ-ಲೇಖನ:
ಬಸವರಾಜ ಕರುಗಲ್