Advertisement
ಲಕ್ಷಾಂತರ ರೂ. ವೆಚ್ಚ ಮಾಡಿ ತನ್ನ ಮನೆಯಲ್ಲಿಯೇ ಸುಂದರ, ಸುಸಜ್ಜಿತ ಆರ್ಟ್ ಗ್ಯಾಲರಿ ಮಾಡಿ ತನ್ನ ಕಲಾಪ್ರೀತಿ ಮೆರೆದ ಈ ಕಲಾವಿದನ ಹೆಸರು ಕರಿಯಪ್ಪ ಹಂಚಿನಮನಿ. ಇವರು ವೃತ್ತಿಯಲ್ಲಿ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಆಗಿದ್ದರೂ ಪ್ರವೃತ್ತಿಯಲ್ಲಿ ಪ್ರತಿಭಾವಂತ ಚಿತ್ರಕಲಾವಿದ. ಅವರು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ವಿವಿಧೆಡೆ ತಮ್ಮ ಚಿತ್ರಕಲೆ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ.
Related Articles
Advertisement
ಕಲಾ ಪ್ರದರ್ಶನಕ್ಕೆ ಬಂದ ಕಲಾವಿದರ ವಾಸ್ತವ್ಯಕ್ಕಾಗಿ ಒಂದು ಪ್ರತ್ಯೇಕ ಕೊಠಡಿ ವ್ಯವಸ್ಥೆವೂ ಮಾಡಿದ್ದಾರೆ. ಸುಮಾರು 30-35 ಕಲಾಕೃತಿಗಳು ಪ್ರದರ್ಶನ ಮಾಡುವಷ್ಟು ವಿಶಾಲವಾದ ಗ್ಯಾಲರಿ ಇದಾಗಿದ್ದು, ಕಲಾ ಗ್ಯಾಲರಿಗೆ ತಕ್ಕಂತೆ ಜನಪದ ಕಲಾ ಶೈಲಿಯಲ್ಲಿ ಗ್ಯಾಲರಿಯ ಗೋಡೆ, ಬಾಗಿಲು, ಕಿಟಕಿ, ಅಲಂಕಾರ ಸಾಮಗ್ರಿ ಅಳವಡಿಸಿ ತಮ್ಮ ಗ್ಯಾಲರಿ ವಿಶಿಷ್ಟ, ವಿಭಿನ್ನ ಹಾಗೂ ಆಕರ್ಷಣೀಯವನ್ನಾಗಿಸಿದ್ದಾರೆ.
ಮನೆಯೂ ವಿಭಿನ್ನ: ಕರಿಯಪ್ಪ ಹಂಚಿನಮನಿಯರು ಕಟ್ಟಿಸಿದ ನೂತನ ಮನೆ ಕೂಡ ವಿಶಿಷ್ಟವಾಗಿದ್ದು ಮನೆಯೇ ಒಂದು ಸುಂದರ ಕಲಾಕೃತಿಯಂತಿದೆ. ಮನೆಯ ಕಾಂಪೌಂಡ್ ಮೇಲೆ ಜನಪದ ಕಲಾಚಿತ್ರಗಳು, ಗೇಟಿಗೆ ಎತ್ತಿನಗಾಡಿಯ ಚಕ್ರ, ನೈಸರ್ಗಿಕವಾಗಿರುವ ಮರದ ಹಲಗೆಗಳನ್ನು ಕಲಾತ್ಮಕವಾಗಿಟ್ಟು ಜೋಡಿಸಿರುವ ಬಾಗಿಲು-ಚೌಕಟ್ಟು ಹೀಗೆ ಎಲ್ಲವೂ ವಿಶಿಷ್ಟವಾಗಿದ್ದು ಒಟ್ಟಾರೆ ಮನೆ ಅಕ್ಷರಶಃ “ಕಲಾ ಮನೆ’ಯಂತಾಗಿದೆ. ಇದು ಕರಿಯಪ್ಪ ಅವರಿಗೆ ಕಲೆ ಮೇಲಿನ ಪ್ರೀತಿ, ಅಭಿಮಾನದ ಸಂಕೇತದಂತಿದೆ.
ಉದ್ಘಾಟನೆಯೂ ವಿಶೇಷ: ಕರಿಯಪ್ಪ ಹಂಚಿನಮನಿಯವರು ಸೆ. 22ರಂದು ಬೆಳಗ್ಗೆ 10ಗಂಟೆಗೆ “ಹಂಚಿನಮನಿ ಆರ್ಟ್ ಗ್ಯಾಲರಿ’ಯ ಉದ್ಘಾಟನೆ ಇಟ್ಟುಕೊಂಡಿದ್ದು ಇದನ್ನೂ ವಿಶಿಷ್ಟವಾಗಿ ಆಯೋಜಿಸಿಕೊಂಡಿದ್ದಾರೆ. ಅಂದು ರಾಜ್ಯಾದ್ಯಂತದಿಂದ 50ಕ್ಕೂ ಹೆಚ್ಚು ಕಲಾವಿದರನ್ನು ಕರೆಸಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಶಿಬಿರ ಏರ್ಪಡಿಸಿದ್ದಾರೆ. ಉದ್ಘಾಟನೆಯ ದಿನ ನೂತನ ಗ್ಯಾಲರಿಯಲ್ಲಿ ಹಂಚಿನಮನಿಯವರ ಕಲಾಕೃತಿಗಳು ರಾರಾಜಿಸಿದರೆ, ಮರುದಿನ ಉಳಿದ ಕಲಾವಿದರ ಕಲಾಕೃತಿಗಳು ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ. ಒಟ್ಟಾರೆ “ಹಂಚಿನಮನಿ ಆರ್ಟ್ ಗ್ಯಾಲರಿ’ ಚಿತ್ರಕಲಾವಿದರಿಗೆ ಒಂದು ವೇದಿಕೆ ಕಲ್ಪಿಸಿ, ಕಲೆಗೆ ಪ್ರೋತ್ಸಾಹದಾಯಕವಾಗಲಿದೆ ಎಂದು ಅಪೇಕ್ಷಿಸಲಾಗಿದೆ.
-ಎಚ್.ಕೆ. ನಟರಾಜ