ಸಂಗೀತ, ಸಾಹಿತ್ಯ, ಕಲೆಗಳು ಪರಸ್ಪರ ಪೂರಕವಾದವುಗಳು. ಭಾವನಾತ್ಮಕ ಪ್ರಪಂಚದ ಮೇರುಕೃತಿಗಳಿವು. ಇವು ಮೂರೂ ಒಂದೆಡೆ ಸೇರಿದರೆ ಶ್ರೋತೃಗಳು ವಿಶೇಷ ಆನಂದ ಹೊಂದುತ್ತಾರೆ, ಆ ರೀತಿಯ ಅನುಭವ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಾಯಿತು. ಸಾಹಿತ್ಯೋತ್ಸವದ ಜೊತೆಗೆ ರಸಮಯ ಕಾವ್ಯ-ಕುಂಚ ಪ್ರಾತ್ಯಕ್ಷಿಕೆ ಹಾಗೂ ಚಿತ್ರಕಲಾ ಪ್ರದರ್ಶನ ನಡೆದು ಕನ್ನಡಾಭಿಮಾನಿಗಳು ಖುಷಿಗೊಂಡರು.
ಶಿರ್ವ ಕುತ್ಯಾರಿನ ಪರಶುರಾಮೇಶ್ವರ ಕ್ಷೇತ್ರದಲ್ಲಿ ನಡೆದ ಈ ಸಾಹಿತ್ಯ ಸಮ್ಮೇಳನದಲ್ಲಿ ಕಾಪು ತಾಲೂಕಿನ ಖ್ಯಾತ ಕಲಾವಿದರೆಲ್ಲಾ ಸೇರಿ ನಡೆಸಿದ ಚಿತ್ರಕಲಾ ಪ್ರದರ್ಶನ ಗಮನಸೆಳೆಯಿತು. ಬೆಳ್ಳೆ ಪದ್ಮನಾಭ ನಾಯಕ್, ರಮೇಶ ಬಂಟಕಲ್, ಉಪಾಧ್ಯಾಯ ಮೂಡುಬೆಳ್ಳೆ, ಪ್ರಮೋದನ ಯು. ಮುಂತಾಗಿ ಹಲವರ ನೈಜ ಮತ್ತು ನವ್ಯ ಕಲಾಕೃತಿಗಳು ಕಲಾಪ್ರದರ್ಶನದಲ್ಲಿದ್ದವು.
ವೈವಿಧ್ಯಮಯ ವಿಷಯಗಳ ಚಿತ್ರಗಳು ಕಲಾಪ್ರದರ್ಶನದಲ್ಲಿದ್ದವು. ಈ ಮಣ್ಣಿನ ವಾಸನೆಯ ಕೆಲವಂಶಗಳು ಕಲಾಕೃತಿಯೊಳಗೆ ಪ್ರಸ್ತುತಗೊಂಡಿದ್ದವು. ಎಲ್ಲಾ ಕ್ಷೇತ್ರಗಳಲ್ಲೂ ಇಂದು ಸ್ವಂತಿಕೆ-ಸೃಜನಶೀಲತೆ, ಚಿಂತನೆ ಎಂಬ ಪದ ಹೆಚ್ಚು ಬಳಕೆಯಾಗುತ್ತಿರುವಂತೆ ಚಿತ್ರಕಲಾವಿದನ ಕಲಾಕೃತಿಗಳಲ್ಲೂ ವೀಕ್ಷಕರು ಈ ಅಂಶಗಳನ್ನು ಹುಡುಕುವುದು ಸರ್ವೇಸಾಮಾನ್ಯವಾಗಿದೆ.ಪ್ರಮೋದ ಅವರ ಕಲಾಕೃತಿಗಳು ನವ್ಯತೆಯ ಮೆರುಗಿನೊಂದಿಗೆ ಚಿಂತನಾತ್ಮಕವಾಗಿದ್ದವು. ಇದು ಒಂದು ವರ್ಗದ ಜನರ ಅಭಿಪ್ರಾಯವಾದರೆ ಇನ್ನೊಂದು ವರ್ಗದ ಜನರು ಸಾಂಪ್ರದಾಯಿಕತೆಗೆ ಒತ್ತು ಕೊಡುವ ನವ್ಯಸ್ಪರ್ಶದ ಕಲಾಕೃತಿಗಳನ್ನು ಕಾಣಬಯಸುತ್ತಾರೆ. ಉಪಾಧ್ಯಾಯ ಮೂಡುಬೆಳ್ಳೆಯವರ ಕಲಾಕೃತಿಗಳು ಈ ವರ್ಗಕ್ಕೆ ಸೇರಿದ್ದವು. ಮತ್ತೂಂದು ವರ್ಗದ ಜನ ನಿಸರ್ಗದೃಶ್ಯ ಚಿತ್ರ, ಜನಪದ ಚಿತ್ರ (ಯಕ್ಷಗಾನ, ಕಂಬಳ, ನೇಮೋತ್ಸವ, ಜಾತ್ರೆ, ನಾಗಮಂಡಲ) ರಾಷ್ಟ್ರನಾಯಕರ ಚಿತ್ರಗಳನ್ನು ಇಷ್ಟಪಡುತ್ತಾರೆ. ರಮೇಶ ಬಂಟಕಲ್, ಪದ್ಮನಾಭ ನಾಯಕ್‌ರವರ ಕೃತಿಗಳು ಈ ನಿಟ್ಟಿನಲ್ಲಿದ್ದವು. ಕಲಾವಿದ ಒಳಮುಖನಾಗದೆ ಸಮಾಜಮುಖೀಯಾಗಬೇಕು. ಅವನ ಕಲಾಕೃತಿಗಳು ಸಮಾಜದ ಪ್ರತಿಬಿಂಬವಾಗಿದ್ದು ಸಮಾಜದ ಒಳಿತನ್ನು ಸಾಧಿಸುವಂತಿರಬೇಕು ಎಂಬ ತತ್ವ ಕಲಾಕೃತಿಯೊಳಗೆ ಅಡಗಿತ್ತು. ಒಟ್ಟಿನಲ್ಲಿ ಈ ಕಲಾಪ್ರದರ್ಶನ ಸಾಹಿತ್ಯೋತ್ಸವಕ್ಕೆ ವರ್ಣಸ್ಪರ್ಶ ನೀಡಿ ಹೊಸ ಸಂಚಲನ ಮೂಡಿಸಿತು.
ಉಪಾಧ್ಯಾಯ ಮೂಡುಬೆಳ್ಳೆ