Advertisement

ಕಲಾವಿದನ ಗೌರವಿಸದೆ ಕಲೆ ಉಳಿಯದು

12:26 PM Apr 29, 2017 | Team Udayavani |

ದಾವಣಗೆರೆ: ಕಲಾವಿದರಿಗೆ ಗೌರವ, ಸೂಕ್ತ ಸ್ಥಾನಮಾನ, ಬದುಕಲು ತಕ್ಕ ಆದಾಯ ಗಳಿಸಲು ಉದ್ಯೋಗ ಕಲ್ಪಿಸಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಬಿ.ಬಿ. ಕಲಿವಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೃಶಕಲಾ ಕಾಲೇಜಿನಲ್ಲಿ ಶುಕ್ರವಾರ ಚಿತ್ರೋತ್ಸವ-2017 ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಲೆ ಎಂತಹುದ್ದಕ್ಕೂ ಜೀವ ತುಂಬಬಲ್ಲ ಶಕ್ತಿ ಹೊಂದಿದೆ. ಪುರಾತನ ಕಾಲದ ಕಲೆ ಉಳಿಯಬೇಕಾದರೆ ಅದಕ್ಕೆ ತಕ್ಕ ಪ್ರೋತ್ಸಾಹ ಬೇಕು. ಕಲೆಯನ್ನು ಅಪ್ಪಿಕೊಂಡು ಪೋಷಿಸುವವನು ಸಮಾಜದಲ್ಲಿ ಸೂಕ್ತ ಸ್ಥಾನಮಾನ ಪಡೆದುಕೊಂಡು ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವಂತೆ ಆಗಬೇಕು.

ಆಗಲೇ ಕಲೆ ಉಳಿಯುವುದು ಸಾಧ್ಯ ಎಂದರು. ಇಂದು ಸರ್ಕಾರ, ಸಮಾಜ ಕಲೆಗೆ ಪ್ರಾಶಸ್ತÂ ನೀಡುತ್ತಿಲ್ಲ. ದೃಶ್ಯಕಲೆಯನ್ನು ಆಯ್ಕೆ ಮಾಡಿಕೊಂಡು ಉತ್ತಮ ಅಭ್ಯಾಸ ಮಾಡಿ, ಹೊರಬರುವ ಪದವೀಧರ, ಸ್ನಾತಕೋತ್ತರ ಪದವೀಧರರು ಇಂದು ಕೆಲಸ ಇಲ್ಲದೆ ಅಲೆದಾಡುವ ಸ್ಥಿತಿ ಇದೆ.

ಇದೇ ಕಾರಣಕ್ಕೆ ಈ ಶಿಕ್ಷಣ ಪಡೆಯಲು ಬರುವವರ ಸಂಖ್ಯೆ ಗಣನೀಯವಾಗಿ ಇಳಿಯುತ್ತಾ ಹೋಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿದ್ಯಾರ್ಥಿಗಳಲ್ಲಿರುವ ಜ್ಞಾನ, ಸೃಜನಶೀಲತೆ ಬಳಕೆಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದರು. ಕಲೆ ವಿಜ್ಞಾನ, ತತ್ವಜ್ಞಾನದೊಂದಿಗೆ ನಿಕಟ ಸಂಬಂಧ ಹೊಂದಿದೆ.

ಓರ್ವ ತತ್ವಜ್ಞಾನಿ, ವಿಜ್ಞಾನಿ ಕಲೆಯ ಮೂಲಕ ಸಾಧೆನೆ ಮಾಡಿದರೆ ಪಕ್ವತೆ ಕಂಡುಕೊಳ್ಳುತ್ತಾನೆ. ಕಲೆಗೆ ಎಲ್ಲ ರೀತಿಯ ಆಯಾಮವಿದೆ. ಮೆದುಳಿನ 200 ಘಟಕಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಕಲೆಯಿಂದ ಲಭ್ಯವಾಗಲಿದೆ ಎಂದರು.  ನಮ್ಮ ವಿವಿಯ ಘಟಕ ಕಾಲೇಜಾಗಿರುವ ದೃಶ್ಯಕಲಾ ಕಾಲೇಜು ಸೌಕರ್ಯಗಳ ಕೊರತೆ ಯಿಂದ ಬಳಲುತ್ತಿದೆ.

Advertisement

ಸಾಧ್ಯವಾದಷ್ಟು ಸವಲತ್ತು ಕಲ್ಪಿಸಲು ನಾನು ಶ್ರಮಿಸಿದ್ದೇನೆ. ಶಿಕ್ಷಕರ ಭರ್ತಿ ಕಾರ್ಯ ಆಗುತ್ತಿಲ್ಲ. ಸರ್ಕಾರ ಒಂದೆರಡು ಸ್ಥಾನ ಭರ್ತಿ ಮಾಡಲು ಮಾತ್ರ ಹೇಳಿದೆ. ಆದರೆ, ಖಾಲಿ ಇರುವ ಎಲ್ಲಾ ಹುದ್ದೆ ಭರ್ತಿ ಮಾಡಿದರೆ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಇದನ್ನು ಸರ್ಕಾರ ಮನಗಾಣಬೇಕಿದೆ ಎಂದರು.

ಇನ್ನು ಕಾಲೇಜಿಗೆ ವಿದ್ಯಾರ್ಥಿ ನಿಲಯ ಬೇಕಿದೆ. ಕಾಲೇಜು ಮುಂದೆ ರಸ್ತೆ ಪಕ್ಕದಲ್ಲಿರುವ ಜಾಗ ನಮ್ಮದೇ. ಬೇರೆಯವರು ಬಳಕೆ ಮಾಡುತ್ತಿದ್ದಾರೆ. ಆದರೆ, ಅದನ್ನು ಬಿಡುವುದಿಲ್ಲ. ಮುಂದೆ ಕಾಲೇಜಿಗೆ ಬೇಕಾದ ಹಾಸ್ಟೆಲ್‌, ಅತಿಥಿ ಗೃಹ ನಿರ್ಮಾಣ ಮಾಡಲು ಕ್ರಮ ವಹಿಸುವೆ ಎಂದು ಅವರು ತಿಳಿಸಿದರು. ಕಲೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಭಿನ್ನತೆ ಹೊಂದಿದೆ.

ನಮ್ಮದೇ ರಾಜ್ಯದಲ್ಲಿ ಧಾರವಾಡದಲ್ಲಿರುವ ಕಲೆ, ಬೀದರ್‌ ನಲ್ಲಿ ಸಿಗಲಾರದು. ಇಲ್ಲಿರುವ ಕಲಾ ಪ್ರಕಾರ ಬೆಂಗಳೂರಿನಲ್ಲಿ ಸಿಗದು. ಪ್ರಾನ್ಸ್‌ ಜಗತ್ತಿನಲ್ಲೇ ಶ್ರೇಷ್ಠ ಕಲೆ ಹೊಂದಿರುವ ದೇಶ. ಅಲ್ಲಿನ ಕಲೆಯ ಶ್ರೀಮಂತಿಕೆ ಬೇರೆಲ್ಲೂ ಸಿಗುವುದಿಲ್ಲ. ಅಮೇರಿಕಾ, ಚೀನಾ, ಜರ್ಮನಿಯಂತಹ ದೇಶಗಳನ್ನೂ ಸಹ ಫ್ರಾನ್ಸ್‌ ಕಲೆಯ ವಿಷಯದಲ್ಲಿ ಹಿಂದಿಕ್ಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ರವೀಂದ್ರ ಎಸ್‌. ಕಮ್ಮಾರ, ಸೋಮಣ್ಣ ಚಿತ್ರಕಾರ, ವಿದ್ಯಾರ್ಥಿ ಸಂಘದ ರಾಕೇಶ್‌ ಇದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ರಚಿಸಿದ್ದ ತರೇಹವಾರಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.    

Advertisement

Udayavani is now on Telegram. Click here to join our channel and stay updated with the latest news.

Next