Advertisement

ಯುವಪೀಳಿಗೆಯಿಂದ ಕಲೆ, ಸಂಸ್ಕೃತಿ ಉಳಿವು

10:43 AM Jul 26, 2019 | Suhan S |

ಚಿಕ್ಕಬಳ್ಳಾಪುರ: ಇಂದಿನ ಆಧುನಿಕ ಕಾಲದಲ್ಲಿ ನಮ್ಮ ಗತಕಾಲದ ಸಂಸ್ಕೃತಿ, ಕಲೆ, ಪರಂಪರೆಯು ಜೀವನಕ್ಕೆ ಮುಕುಟದ ರೀತಿ ಇದ್ದು ಈ ಪರಂಪರೆಯನ್ನು ಮುಂದು ವರಿಸಿಕೊಂಡು ಹೋಗುವುದು ಯುವ ಪೀಳಿಗೆಯ ಆದ್ಯ ಕರ್ತವ್ಯವೆಂದು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

Advertisement

ನಗರದ ಹೊರ ವಲಯದ ಅಗಲಗುರ್ಕಿ ಬಿಜಿಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ತಂದೆ ತಾಯಿಗಳ ಕನಸುಗಳನ್ನು ಸಾಕಾರಗೊಳಿಸುವುದು ವಿದ್ಯಾರ್ಥಿಗಳ ಕರ್ತವ್ಯ ಶಿಕ್ಷಣದ ಜೊತೆ ಸುಸಂಸ್ಕೃತಿ ಮತ್ತು ಮಾನವೀಯತೆ ವಿದ್ಯಾರ್ಥಿಗಳ ಸಾಧನೆಗೆ ಸುಲಭ ದಾರಿ ಎಂದರು.

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಸಂಸ್ಕೃತಿ, ಪರಂಪರೆಯಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳಿಸುತ್ತೇವೆ. ಆಧುನಿಕ ಭಾರತದಲ್ಲಿ ಬದಲಾವಣೆಯ ಬಿರುಗಾಳಿಗೆ ಸಿಲುಕಿ ಸಾಂಸ್ಕೃತಿಕ ಪರಂಪರೆಯು ನಶಿಸುತ್ತಿರುವ ಈ ಕಾಲದಲ್ಲಿ ಭಾರತದ ಭವ್ಯ ಪರಂಪರೆಯ ಪ್ರಖರತೆಯನ್ನು ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿ ಹದಿಹರೆಯದ ಯುವ ಮನಸ್ಸುಗಳಲ್ಲಿ ಪರಂಪರೆ ಮರುಕಳಿಸುವಂತೆ ಮಾಡುವುದು ಬಹಳ ಮುಖ್ಯ ಎಂದರು.

ಅಷ್ಟೇಯಲ್ಲದೆ ಕಾಣದ ಕಾಷ್ಠದಗ್ನಿಯಂತೆ ಸುಪ್ತವಾಗಿರುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಸುವುದು ಕೂಡ ಈ ಕಾರ್ಯಕ್ರಮದ ಸದುದ್ದೇಶವಾಗಿದ್ದು ಕಾರ್ಯಕ್ರಮ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಅನ್ವೇಷಣೆಗೆ ವೇದಿಕೆಯಾಗಿದೆ ಎಂದರು. ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹಾಸ್ವಾಮೀಜಿ ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಕಳೆದ ಸಾಲಿನಲ್ಲಿ 15 ಗ್ರಾಮಾಂತರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳು ನಿಮಗೆ ಸ್ಫೂರ್ತಿದಾಯಕವೆಂದು ತಿಳಿಸಿದರು. ಸಾಂಪ್ರದಾಯಕ ಉಡುಪು ಧರಿಸಿ ಕಳೆದ ಈ ಸುಂದರ ಕ್ಷಣಗಳೇ ವಿದ್ಯಾರ್ಥಿ ಜೀವನದಲ್ಲಿ ಮರೆಯದ ನೆನಪುಗಳು. ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರತಿಯೊಬ್ಬರು ಪೋಷಿಸಬೇಕು ಎಂದರು. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸೀತಾರಾಮರೆಡ್ಡಿ ಮಾತನಾಡಿ, ಬಿಜಿಎಸ್‌ ಶಿಕ್ಷಣ ಸಂಸ್ಥೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೇ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕವಾಗಿ ಬೆಳೆಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಪ್ರತಿಭೆ ಗುರುತಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಸಾಂಸ್ಕೃತಿಕ ಪರಂಪರೆಯಲ್ಲಿಯೂ ಕೂಡ ಮೇಲುಗೈ ಸಾಧಿಸಿದ್ದು ಬಿಜಿಎಸ್‌ ಎಂದರೆ ಜ್ಞಾನದ ಹೂವುಗಳು ಅರಳುವ ತೋಟದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಬಿಜಿಎಸ್‌ ಪಿಯು ಕಾಲೇಜುಗಳ ಮುಖ್ಯಸ್ಥ ಡಾ.ಎನ್‌. ಮಧುಸೂಧನ್‌, ಪ್ರಾಂಶುಪಾಲ ಎಚ್.ಬಿ. ರಮೇಶ್‌, ಉಪ ಪ್ರಾಂಶುಪಾಲ ಜೆ.ಚಂದ್ರಮೋಹನ್‌, ಜ್ಯೋತಿ ಕಿರಣ್‌ ಸೇರಿದಂತೆ ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:

2018-19 ಸಾಲಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಅಭಿನಂದಿಸಿದರು. ಬಳಿಕ ಸಾಂಸ್ಕೃತಿಕ ಮೇಳದಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ಗಮನ ಸೆಳೆದರು. ಕಾಲೇಜು ಆವರಣದಲ್ಲಿ ಬಿಡಿಸಿದ್ದ ಬಣ್ಣಬಣ್ಣದ ರಂಗೋಲಿ ಚಿತ್ತಾರ ಗಮನ ಸೆಳೆದರೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿಭೆ ಆನಾವರಣಕ್ಕೆ ಸಾಕ್ಷಿಯಾದವು.
Advertisement
Advertisement

Udayavani is now on Telegram. Click here to join our channel and stay updated with the latest news.

Next