ಮುಂಬೈ: ಮಹಾರಾಷ್ಟ್ರದ ಅಂಡರ್ 19 ಕ್ರಿಕೆಟರ್ ಅರ್ಶಿನ್ ಕುಲಕರ್ಣಿ ಅವರು ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ನಲ್ಲಿ ಇತಿಹಾಸ ಬರೆದಿದ್ದಾರೆ. ಕೇವಲ 54 ಎಸೆತಗಳಲ್ಲಿ ಅರ್ಶಿನ್ 117 ರನ್ ಚಚ್ಚಿ ಸುದ್ದಿಯಾಗಿದ್ದಾರೆ.
ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ನ ಏಳನೇ ಪಂದ್ಯದಲ್ಲಿ ಪುಣೇರಿ ಬಪ್ಪಾ ಮತ್ತು ಈಗಲ್ ನಾಸಿಕ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈಗಲ್ ಟೈಟಾನ್ಸ್ ತಂಡದ ಬ್ಯಾಟರ್ ಅರ್ಶಿನ್ ತಮ್ಮ ತಂಡಕ್ಕೆ ದೊಡ್ಡ ಸ್ಕೋರ್ ಗಳಿಸಲು ಸಹಾಯಕವಾದರು.
3 ಬೌಂಡರಿ ಮತ್ತು 13 ಸಿಕ್ಸರ್ ಗಳನ್ನು ಹೊಡೆದ ಅರ್ಶಿನ್ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದರು. 54 ಎಸೆತಗಳಲ್ಲಿ 117 ರನ್ ಗಳಿಸಿದ ಅರ್ಶಿನ್ ಅವರ ಈ ಇನ್ನಿಂಗ್ಸ್ ತಮ್ಮ ತಂಡವನ್ನು ಒಂದು ರನ್ ನಿಂದ ಗೆಲ್ಲಲು ನೆರವಾಯಿತು.
ಈಗಲ್ ತಂಡ 203 ರನ್ ಗಳಿಸಿತು. ಅರ್ಶಿನ್ ಹೊರತುಪಡಿಸಿ ರಾಹುಲ್ ತ್ರಿಪಾಠಿ 41 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಪುಣೆ ತಂಡ ಕೂಡ ತಕ್ಕ ಉತ್ತರ ನೀಡಿತು. ಋತುರಾಜ್ ಗಾಯಕ್ವಾಡ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆದರೆ, ಒಂದು ರನ್ ಅಂತರದಿಂದ ಋತು ಪಡೆ ಸೋಲನುಭವಿಸಿತು.
ಅಂತಿಮ ಓವರ್ ನಲ್ಲಿ ಪುಣೆ ತಂಡಕ್ಕೆ 6 ರನ್ ಅಗತ್ಯವಿತ್ತು. ಈ ವೇಳೆ ಬೌಲಿಂಗ್ ನಡೆಸಿದ ಅರ್ಶಿನ್ ಕುಲಕರ್ಣಿ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಎಲ್ಲರ ಮನಸೆಳೆದರು .