ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದ ಕಾಣಿಕೆ ಹುಂಡಿಯಿಂದ ಕಳವು ಮಾಡುತ್ತಿದ್ದ ತುಮಕೂರು ಮೂಲದ ತಿಪಟೂರು ಅಶ್ವಿನ್ (20)ನನ್ನು ಶುಕ್ರವಾರ ಬಂಧಿಸಲಾಗಿದೆ.
ಗುರುವಾರ ರಾತ್ರಿ 9 ಗಂಟೆಗೆ ದೇಗುಲದ ಒಳಾಂಗಣದೊಳಗೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕರ್ತವ್ಯ ನಿರತ ದೇಗುಲದ ಸಿಬ್ಬಂದಿ ಗಮನಕ್ಕೆ ಬಂತು.
ಆತ ಕುಕ್ಕೆಲಿಂಗ ಗುಡಿಯ ಎದುರಿನಲ್ಲಿ ಭಕ್ತರು ಹಾಕಿದ ಕಾಣಿಕೆಯನ್ನು ಹುಂಡಿಯ ಮೇಲ್ಭಾಗದಿಂದ ತೆಗೆದು ಜೇಬಲ್ಲಿ ತುಂಬಿಸಿಕೊಳ್ಳುತ್ತಿದ್ದ. ಇದೇ ರೀತಿ ಎಲ್ಲ ಕಾಣಿಕೆ ಹುಂಡಿಗಳಿಂದ ಕಳವು ಮಾಡುತ್ತಿದ್ದುದು ಸಿಸಿಟಿವಿ ದೃಶ್ಯದಿಂದ ತಿಳಿದು ಬಂತು.
ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್.ರವೀಂದ್ರ ಅವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.
ವಿಚಾರಣೆ ವೇಳೆ ಆತ ಹುಂಡಿ ತುಂಬಿ ಮೇಲ್ಭಾಗದಲ್ಲಿ ಕಾಣುತ್ತಿದ್ದ ನೋಟುಗಳನ್ನು ತೆಗೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.