ಹೊಸದಿಲ್ಲಿ : “2019ರಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ವಹಿಸಿಕೊಳ್ಳಲು ನಾನು ಸಿದ್ದನಿದ್ದೇನೆ; ಅಂತೆಯೇ ಪಕ್ಷದ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಲು ಕೂಡ ಸಿದ್ಧನಿದ್ದೇನೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ಬರ್‌ಕ್ಲೆ ಯಲ್ಲಿನ ಪ್ರತಿಷ್ಠಿತ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜತೆಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಬಿಜೆಪಿ ಸರಕಾರ ಕಳೆದ ವರ್ಷ ಕೈಗೊಂಡಿದ್ದ ನೋಟು ಅಮಾನ್ಯದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದರು; ಮಾತ್ರವಲ್ಲದೆ ಗಡಿಯಾಚೆಗಿನ (ಪಾಕ್ ಉಗ್ರರ) ಭಯೋತ್ಪಾದನೆ ಹೆಚ್ಚಿರುವ ಬಗ್ಗೆಯೂ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
“ಇಂಡಿಯಾ ಅಟ್ 70: ರಿಫ್ಲೆಕ್ಷನ್ಸ್ ಆನ್ ದಿ ಪಾತ್ ಫಾರ್ವರ್ಡ್’ ಕುರಿತಾಗಿ ನಡೆದ ಸಂವಾದದಲ್ಲಿ ಕಾಂಗ್ರೆಸ್ ಪಕ್ಷದ ಮುಂದಿರುವ ಭವಿಷ್ಯತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿರುವುದರಿಂದ ಪಕ್ಷವನ್ನು ಪುನರ್ ನಿರ್ಮಿಸುವ ಅಗತ್ಯವಿದೆ ಎದು ರಾಹುಲ್ ಹೇಳಿದರು.
ಕಾಂಗ್ರೆಸ್ ಸೋಲಿಗೆ ಅದರ ದರ್ಪ, ಉದ್ಧಟತನಗಳೇ ಕಾರಣ ಎಂಬುದನ್ನು ರಾಹುಲ್ ವಿನಯದಿಂದ ಒಪ್ಪಿಕೊಂಡರು.
“ಹೆಚ್ಚಿನ ದೇಶಗಳು ವಂಶಪಾರಂಪರ್ಯವಾಗಿ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಕೂಡ ಅದು ಅಷ್ಟೇ ಸಾಮಾನ್ಯವಾಗಿದೆ. ಭಾರತದಲ್ಲಿನ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲಿ ವಂಶಪಾರಂಪರ್ಯ ನಡೆಯುತ್ತಿದೆ. ಉದಾಹರಣೆಗೆ ಅಖೀಲೇಶ್ (ಯಾದವ್), (ಎಂಕೆ) ಸ್ಟಾಲಿನ್, ಮತ್ತು (ನಟ) ಅಭಿಷೇಕ್ ಬಚ್ಚನ್ ಕೂಡ ಸಿನೇಮಾ ರಂಗದಲ್ಲಿ ಇದಕ್ಕೆ ಉದಾಹರಣೆ. ಆದುದರಿಂದ ವಂಶಪಾರಂಪರ್ಯದ ಬಗ್ಗೆ ಮಾತನಾಡುವಾಗ ಕೇವಲ ನನ್ನನ್ನು ಗುರಿ ಮಾಡಬೇಡಿ’ ಎಂದು ರಾಹುಲ್ ಹೇಳಿದರು.
2012ರ ಸುಮಾರಿಗೆ ಕಾಂಗ್ರೆಸ್ ಪಕ್ಷದಲ್ಲಿ ದರ್ಪ, ಅಹಂಕಾರ, ಉದ್ದಟತನಗಳು ತಾಂಡವವಾಡಿದ್ದವು. ಅದರ ಫಲವಾಗಿಯೇ ಕಾಂಗ್ರೆಸ್ ಪತನವನ್ನು ಕಂಡಿತು. ಜನರೊಂದಿಗೆ ಮಾತನಾಡುವುದನ್ನೇ ಕಾಂಗ್ರೆಸ್ ನಾಯಕರು ಬಿಟ್ಟುಬಿಟ್ಟರು. ಹಾಗಾಗಿ ಪಕ್ಷ ಜನರಿಂದಲೇ ದೂರವಾಯಿತು. ಇದುವೇ ಅನಂತರದ ವರ್ಷಗಳಲ್ಲಿ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ರಾಹುಲ್ ಹೇಳಿದರು.