ನಟ ಶರಣ್ ನಾಯಕನಾಗಿ ಅಭಿನಯಿಸಿರುವ ಚಿತ್ರ “ಅಧ್ಯಕ್ಷ ಇನ್ ಅಮೆರಿಕಾ’ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ಎರಡು-ಮೂರು ತಿಂಗಳಿನಿಂದ ಭರ್ಜರಿಯಾಗಿ ಪ್ರಮೋಶನ್ ಕೆಲಸಗಳಲ್ಲಿ ಬಿಝಿಯಾಗಿರುವ “ಅಧ್ಯಕ್ಷ ಇನ್ ಅಮೆರಿಕಾ’ ಇದೇ ಅಕ್ಟೋಬರ್ 4ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. “ರ್ಯಾಂಬೋ-2′ ಚಿತ್ರದ ಬಳಿಕ ಶರಣ್ ಅಭಿನಯಿಸುತ್ತಿರುವ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಕಥೆ ಸ್ವದೇಶ ಮತ್ತು ವಿದೇಶ ಎರಡೂ ಕಡೆಗಳಲ್ಲಿ ನಡೆಯಲಿದ್ದು, ಅದರಂತೆ ಚಿತ್ರವನ್ನು ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಲ್ಲೂ ಚಿತ್ರೀಕರಿಸಲಾಗಿದೆ.
ಚಿತ್ರದಲ್ಲಿ ಶರಣ್ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಜೋಡಿಯಾಗಿದ್ದು, ಉಳಿದಂತೆ ದಿಶಾ ಪಾಂಡೆ, ಅಶೋಕ್, ಅವಿನಾಶ್, ಪ್ರಕಾಶ್ ಬೆಳವಾಡಿ, ಶಿವರಾಜ್ ಕೆ.ಆರ್.ಪೇಟೆ, ಚಿತ್ರಾ ಶೆಣೈ, ಪದ್ಮಜಾ ರಾವ್, ತಬಲ ನಾಣಿ, ಮಕರಂದ್ ದೇಶಪಾಂಡೆ, ತಾರಕ್ ಪೊನ್ನಪ್ಪ, ಸಾಧುಕೋಕಿಲ, ರಂಗಾಯಣ ರಘು, ರಾಕ್ಲೈನ್ ಸುಧಾಕರ್, ಅಂಥೋನಿ ಕಮಲ್, ಸುಂದರ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗೆ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಫಸ್ಟ್ ಕಾಪಿಯೊಂದಿಗೆ ಹೊರಬಂದಿರುವ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಅಧ್ಯಕ್ಷ’ನಿಗೆ “ಯು/ಎ’ ಸರ್ಟಿಫೀಕೆಟ್ ಕೊಟ್ಟು, ರಿಲೀಸ್ಗೆ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಬಿಡುಗಡೆಯಾಗಿರುವ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಟೀಸರ್, ಟ್ರೇಲರ್ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಅಕ್ಟೋಬರ್ ಮೊದಲವಾರ ತೆರೆಗೆ ತರಲು ಯೋಜಿಸಿದೆ.
“ಪೀಪಲ್ ಮೀಡಿಯಾ ಫ್ಯಾಕ್ಟರಿ’ ಲಾಂಛನದಲ್ಲಿ ವಿಶ್ವ ಪ್ರಸಾದ್ ಟಿ.ಜಿ ನಿರ್ಮಿಸಿರುವ “ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸುಧಾಕರ್ ಎಸ್ ರಾಜ್, ಸಿದ್ಧಾರ್ಥ್ ರಾಮಸ್ವಾಮಿ, ಅನೀಶ್ ತರುಣ್ ಕುಮಾರ್ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಸಂಕಲನವಿದೆ. ಒಟ್ಟಾರೆ ಒಂದರ ಹಿಂದೊಂದು ಕಾಮಿಡಿ ಹಿಟ್ ಚಿತ್ರಗಳನ್ನು ಕೊಡುತ್ತ ಬಂದಿರುವ ಶರಣ್ ಕಾಮಿಡಿ ಕಮಾಲ್ ಇಲ್ಲೂ ಮುಂದುವರೆಯಲ್ಲಿದ್ದು, “ಅಧ್ಯಕ್ಷ’ ಅಮೆರಿಕಾದಲ್ಲಿ ಹೇಗಿದ್ದಾನೆ ಅನ್ನೋದು ಶೀಘ್ರದಲ್ಲಿಯೆ ಗೊತ್ತಾಗಲಿದೆ.