Advertisement

QR ಕೋಡ್ ನ ನಕಲಿ ಗುರುತಿನ ಚೀಟಿಯೊಂದಿಗೆ ಲೋಕಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಂಧನ

04:30 PM Aug 21, 2020 | keerthan |

ಮುಂಬಯಿ: ಕ್ಯೂಆರ್‌ ಕೋಡ್‌ ಹೊಂದಿರುವ ನಕಲಿ ಗುರುತಿನ ಚೀಟಿ ಬಳಸಿಕೊಂಡು ಉಪನಗರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 21ರ ಹರೆಯದ ಯುವತಿಯನ್ನು ಬಂಧಿಸಲಾಗಿದೆ ಎಂದು ಸರಕಾರಿ ರೈಲ್ವೇ ಪೊಲೀಸ್‌ (ಜಿಆರ್‌ಪಿ) ಶುಕ್ರವಾರ ತಿಳಿಸಿದೆ.

Advertisement

ನೆರೆಯ ಪಾಲ್ಗಾರ್‌ ಜಿಲ್ಲೆಯ ನಲಸೋಪಾರ ನಿವಾಸಿಯಾಗಿರುವ ಯುವತಿಯನ್ನು ಗುರುವಾರ ಪಶ್ಚಿಮ ರೈಲ್ವೇಯ ಬೊರಿವಲಿ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದಕ್ಷಿಣ ಮುಂಬಯಿಯ ಮರೀನ್‌ ಲೈನ್ ನಲ್ಲಿರುವ ಎಲೆಕ್ಟ್ರಾನಿಕ್‌ ಅಂಗಡಿಯಲ್ಲಿ ಈ ಯುವತಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತುರ್ತು ಮತ್ತು ಅಗತ್ಯ ಸೇವೆಗಳ ಸಿಬಂದಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ನೌಕರರು ಮತ್ತು ಎಂಬಿಪಿಟಿಯಂತಹ ಕೆಲವು ಇತರ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಮಾತ್ರ ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ಇದನ್ನು ಖಚಿತಪಡಿಸಿಕೊಳ್ಳಲು ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅರ್ಹರಿಗೆ ಮಹಾರಾಷ್ಟ್ರ ಸರಕಾರದ ಕಡೆಯಿಂದ ಕ್ಯೂಆರ್‌ ಕೋಡ್‌ ಹೊಂದಿರುವ ಹೊಸ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ; ಬಡತನ, ಅವಮಾನಗಳ ಬೆಂಕಿಯ ನಡುವೆ ಅರಳಿದ ಚಿನ್ನದ ಹೂವು: ಪಿ.ಟಿ ಉಷಾ ಗೋಲ್ಡನ್ ಜರ್ನಿ

ಮೂಲಗಳ ಪ್ರಕಾರ, ಯುವತಿಯು ವಿರಾರ್‌ ಮತ್ತು ಚರ್ಚ್‌ಗೇಟ್‌ ನಡುವೆ ಜುಲೈ 19 ರಿಂದ ಆಗಸ್ಟ್‌ 18 ರವರೆಗಿನ ಎರಡನೇ ದರ್ಜೆಯ ಮಾಸಿಕ ಸೀಸನ್‌ ಟಿಕೆಟ್‌ ಹೊಂದಿದ್ದಳು. ಬೊರಿವಲಿ ನಿಲ್ದಾಣದಲ್ಲಿ ಟಿಕೆಟ್‌ ತಪಾಸಕ ಅದನ್ನು ಪರೀಕ್ಷಿಸಿದಾಗ ಆಕೆಯ ಗುರುತಿನ ಚೀಟಿ ನಕಲಿ ಎಂದು ತಿಳಿದುಬಂದಿದೆ. ಕ್ಯೂಆರ್‌ ಕೋಡ್‌ ಹೊಂದಿರುವ ನಕಲಿ ಗುರುತಿನ ಚೀಟಿಯನ್ನು ಬಿಎಂಸಿ ನೌಕರರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಟಿಕೆಟ್‌ ತಪಾಸಕ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದಾಗ ಅದು ಅಧಿಕೃತ ಚೀಟಿ ಅಲ್ಲ ಎಂದು ತಿಳಿದು ಬಂದಿದೆ.  ಆದ್ದರಿಂದ ರೈಲ್ವೇ ಸಿಬಂದಿ ಆಕೆಯನ್ನು ಜಿಆರ್‌ಪಿಗೆ ಹಸ್ತಾಂತರಿಸಿದರು. ಆಕೆ ನಕಲಿ ಗುರುತಿನ ಚೀಟಿಯನ್ನು ಹೇಗೆ ಪಡೆದಳು ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈಕೆಯ ವಿರುದ್ಧ ಐಪಿಸಿಯ ಸೆಕ್ಷನ್‌ 420 (ಮೋಸ), 465 (ಖೋಟಾ), 468 (ಮೋಸ ಮಾಡುವ ಉದ್ದೇಶದಿಂದ ದಾಖಲೆಗಳ ನಕಲು ಮಾಡುವಿಕೆ) ಮತ್ತು 471ರ (ನಕಲಿ ದಾಖಲೆಯನ್ನು ಅಸಲಿ ದಾಖಲೆಯಾಗಿ ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next