Advertisement

ಗೆಳತಿಗೆ ಬ್ಲ್ಯಾಕ್‌ಮೇಲ್‌ ಮಾಡಿದವನ ಸೆರೆ

12:52 AM Aug 16, 2019 | Lakshmi GovindaRaj |

ಬೆಂಗಳೂರು: ಹಳೆಯ ಸ್ನೇಹಿತೆಯ ಜತೆಗಿನ ಖಾಸಗಿ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಯುವಕನನ್ನು ನಗರದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಾಣಸವಾಡಿಯ ಕಿರಣ್‌ (23) ಬಂಧಿತ.

Advertisement

ದೂರುದಾರ ಯುವತಿ ಹಾಗೂ ಆರೋಪಿ ಕಿರಣ್‌, ಎರಡು ವರ್ಷಗಳಿಂದ ಹೈಟೆಕ್‌ ಹೇರ್‌ಸಲೂನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವೊಮ್ಮೆ ಕಳೆದ ಖಾಸಗಿ ಕ್ಷಣಗಳ ಫೋಟೋಗಳನ್ನು ಯುವತಿ ತನ್ನ ಮೊಬೈಲ್‌ನಲ್ಲೇ ಸೇವ್‌ ಮಾಡಿದ್ದಳು. ಕೆಲ ದಿನಗಳ ಹಿಂದೆ ಯುವತಿಯನ್ನು ಪುಸಲಾಯಿಸಿದ ಕಿರಣ್‌, ಖಾಸಗಿ ಪೋಟೋಗಳನ್ನು ತನ್ನ ಮೊಬೈಲ್‌ಗೆ ಕಳುಹಿಸಿಕೊಂಡಿದ್ದ.

ಇತ್ತೀಚೆಗೆ ಇಬ್ಬರ ನಡುವೆಯೂ ವೈಮನಸ್ಸು ಉಂಟಾಗಿ ಪರಸ್ಪರ ದೂರವಾಗಿದ್ದರು. ದೂರುದಾರ ಯುವತಿ ಕಿರಣ್‌ ಜತೆ ಮಾತನಾಡುತ್ತಿರಲಿಲ್ಲ. ಹೀಗಾಗಿ, ತನ್ನ ಜತೆ ಈ ಹಿಂದಿನಂತೆ ನಡೆದುಕೊಂಡು ಸಹಕರಿಸದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಕಿರಣ್‌ ಬೆದರಿಕೆವೊಡ್ಡಿದ್ದ. ಜತೆಗೆ, ಆಕೆಯ ವ್ಯಾಟ್ಸ್‌ಆ್ಯಪ್‌ಗೆ ಫೋಟೋ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ.

ಇದರಿಂದ ಮನನೊಂದ ಯುವತಿ ಆ.10ರಂದು ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಚುರುಕುಗೊಳಿಸಿದ ಇನ್ಸ್‌ಪೆಕ್ಟರ್‌ ಕೆ.ಎನ್‌.ಯಶವಂತ್‌ ಕುಮಾರ್‌ ನೇತೃತ್ವದ ತಂಡ, ಆರೋಪಿ ಕಿರಣ್‌ನನ್ನು ಬಂಧಿಸಿದ್ದು, ಆತನ ಬಳಿ ಇದ್ದ ಮೊಬೈಲ್‌ ಜಪ್ತಿಮಾಡಿಕೊಂಡಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಗೆಳತಿಯ ಬೆನ್ನುಬಿದ್ದ ಕಾಲೇಜು ಸಹಪಾಠಿ!: ಮತ್ತೊಂದು ಪ್ರಕರಣದಲ್ಲಿ ತನ್ನ ಜತೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಟೋಗಳನ್ನು ಪ್ರಕಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆವೊಡ್ಡುತ್ತಿದ್ದಾನೆ ಎಂದು ಆರೋಪಿಸಿ ಹೈದ್ರಾಬಾದ್‌ ಮೂಲದ ವಿವಾಹಿತ ಮಹಿಳೆಯೊಬ್ಬರು ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಈ ದೂರು ಆಧರಿಸಿ, ಮಹಿಳೆ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುವಾಗ ಸಹಪಾಠಿಯಾಗಿದ್ದ, ಹೈದ್ರಾಬಾದ್‌ನ ಎಂಜಿನಿಯರ್‌ ರವಿತೇಜ ಯಾದವ್‌ ಬತುಲಾ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಂಜಿನಿಯರಿಂಗ್‌ ವಿದ್ಯಾಭ್ಯಾಸದ ವೇಳೆ ರವಿತೇಜನ ಪರಿಚಯವಿತ್ತು. ವಿದ್ಯಾಭ್ಯಾಸದ ಬಳಿಕ ಮಹಿಳೆಗೆ ವಿವಾಹವಾಗಿರುವ ವಿಷಯ ಗೊತ್ತಿದ್ದರೂ, ಆರೋಪಿ ಆಕೆಯ ಹಿಂದೆ ಬಿದ್ದಿದ್ದ.

ಸ್ನೇಹಿತರಾಗಿದ್ದ ವೇಳೆ ಆಶ್ಲೀಲ ಫೋಟೋಗಳನ್ನು ತೆಗೆದಿಟ್ಟುಕೊಂಡಿದ್ದ ಆರೋಪಿ, ಈಗ ಅವುಗಳನ್ನು ತೋರಿಸಿ ಕಿರುಕುಳ ನೀಡುತ್ತಿದ್ದಾನೆ. ತನ್ನ ಜತೆ ಮಾತನಾಡಿ ಸಹಕರಿಸದಿದ್ದರೆ ಯೂಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹರಿಬಿಡುತ್ತೇನೆ. ಕೊಲೆ ಮಾಡುತ್ತೇನೆ ಎಂದು ಬೆದರಿಕೆಯೊಡ್ಡುತ್ತಿದ್ದಾನೆ.

ಈ ಕುರಿತು ಆತನ ಪೋಷಕರಿಗೆ ಮಾಹಿತಿ ನೀಡಿದರೂ ಪುನಃ ಬೆದರಿಕೆ ಮುಂದುವರಿಸಿದ್ದಾನೆ ಎಂದು ದೂರುದಾರೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಪ್ರಕರಣ ಸೈಬರ್‌ ಕ್ರೈಂ ವ್ಯಾಪ್ತಿಯಲ್ಲಿ ಬರಲಿದೆ. ಹೀಗಾಗಿ ಸೈಬರ್‌ ಕ್ರೈಂ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗುವುದು ಎಂದು ಕೋರಮಂಗಲ ಪೊಲೀಸರು ಹೇಳಿದರು.

ಖಾಸಗಿ ಕ್ಷಣ ಕ್ಲಿಕ್ಕಿಸುವ ಮುನ್ನ ಯೋಚಿಸಿ!: ಸ್ನೇಹಿತರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಮೊಬೈಲ್‌, ವಿದ್ಯುನ್ಮಾನ ಉಪಕರಣಗಳಲ್ಲಿ ಸೇವ್‌ ಮಾಡಿಟ್ಟುಕೊಂಡರೆ ಮುಂದೆ ಈ ರೀತಿಯ ಅಪಾಯಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಕಿರುಕುಳ, ಬೆದರಿಕೆಗಳಿಗೂ ಬಲಿಯಾಗುವ ಸನ್ನಿವೇಶಗಳು ಸೃಷ್ಟಿಯಾಗಬಹುದು. ಹೀಗಾಗಿ ಖಾಸಗಿ ಕ್ಷಣಗಳನ್ನು ಸೆರೆಹಿಡಿಯುವ ಮುನ್ನ ಎಚ್ಚರವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next