ಆನೇಕಲ್: ಪಾದರಾಯನಪುರ ನಿವಾಸಿಯಾಗಿದ್ದ ಕೊರೊನಾ ಸೋಂಕಿತ ಕಳ್ಳನೊಬ್ಬನನ್ನು ಬಂಧಿಸಿದ ತಾಲೂಕಿನ ಹೆಬ್ಬಗೋಡಿ ಠಾಣೆಯ 30 ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಿರುವ ಘಟನೆ ನಡೆದಿದೆ. ತಾಲೂಕಿನ ಹೆಬ್ಬಗೋಡಿ ಠಾಣೆಯಲ್ಲಿ ಪಾದರಾಯನಪುರ ನಿವಾಸಿಯಾಗಿರುವ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿ ದ್ದರು. ಆದರೆ, ಪೊಲೀಸರಿಗೆ ಕಳ್ಳ ಕೊರೊನಾ ಸೋಂಕಿತನಾಗಿರುವುದು ತಿಳಿದಿರಲಿಲ್ಲ ಎನ್ನಲಾಗಿದೆ.
ಹೆಬ್ಬಗೋಡಿ ಭಾಗದ ಖಾಸಗಿ ಕಂಪನಿಯೊಂದರಲ್ಲಿ ಕಬ್ಬಿಣ ಕಳ್ಳತನ ಮಾಡಿದ್ದು, ಕಂಪನಿಯವರಿಗೆ ಮಾಹಿತಿ ತಿಳಿದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿ ದ್ದರು. ಅದರಲ್ಲಿ ಕೊರೊನಾ ಸೋಂಕು ಪಾಸಿಟಿವ್ ಇರುವ ಪಾದರಾಯನಪುರದ ವ್ಯಕ್ತಿ ಪೊಲೀಸರ ನಿದ್ದೆಗೆಡಿಸಿದ್ದಾನೆ. ಪೊಲೀಸರು ಬುಧವಾರ ಕಳ್ಳನನ್ನು ಆನೇಕಲ್‌ನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕಳುಹಿಸುವ ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.
ಆಗ ಆ ಕಳ್ಳನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಇಡೀ ಠಾಣೆ ಹಾಗೂ ಎಲ್ಲಾ ಪೇದೆ ಹಾಗೂ ಅಧಿಕಾರಿಗಳು ಬೆಚ್ಚಿಬಿದ್ದಿದ್ದು, ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಆತನಿಗೆ ಊಟ ನೀಡಿದವರು, ವಾಶ್ ರೂಂಗೆ ಕರೆದೊಯ್ದವರು, ಜೀಪ್‌ನಲ್ಲಿ ಕರೆದುಕೊಂಡು ಹೋದವರು.. ಹೀಗೆ ಅನೇಕರನ್ನು ಸೇರಿಸಿ ಒಟ್ಟು 30 ಮಂದಿಯನ್ನು ಇದೀಗ ಕ್ವಾರಂಟೈನ್ ಮಾಡಲಾಗಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಕ್ವಾರಂಟೈನ್ ನಲ್ಲಿ ಠಾಣೆ ಎಸ್‌ಐ, ಎಎಸ್‌ಐ, ಪೇದೆ, ಹೋಂ ಗಾರ್ಡ್ಸ್.. ಹೀಗೆ ಅನೇಕರು ಸೇರಿದ್ದು, ಹೆಬ್ಬಗೋಡಿ ಬಳಿ ಶ್ರೀ ಸಾಯಿ ವಿಶ್ರಾಂತಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕು ಪಾಸಿಟಿವ್ ಆಗಿರುವ ಆರೋಪಿ ಜೊತೆ ಇರುವ ಇನ್ನಿಬ್ಬರು ಆರೋಪಿಗಳಿದ್ದು, ಅವರಲ್ಲಿ ಒಬ್ಬನಿಗೆ ಸೋಂಕು ಪತ್ತೆಯಾಗಿದೆ. ಈವರೆಗೂ ತಾಲೂಕಿನಲ್ಲಿ ಯಾವುದೇ ಪ್ರಕರಣವಿರಲಿಲ್ಲ.
ಹೀಗಾಗಿ ಜನ ನೆಮ್ಮದಿಯಾಗಿದ್ದರು. ಪಾದರಾಯನ ಪುರದ ಈ ವ್ಯಕ್ತಿಯಿಂದಾಗಿ ಇಡೀ ಠಾಣೆಗೆ ಬರಸಿಡಿಲು ಬಡಿದಂತಾಗಿದೆ. ಠಾಣೆಯಲ್ಲಿ ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆ 3 ಸಮಯ ಸ್ಯಾನಿಟೈಸರ್ ಮಾಡಲಾಗುತ್ತಿ ದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಠಾಣೆಗೆ ಬಂದು ಚರ್ಚಿಸಿದ್ದಾರೆ. ಆನೇಕಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಪೊಲೀಸರನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಗುರುವಾರ ವರದಿ ಹೊರಬರಲಿದೆ.