ಸವದತ್ತಿ: ತಾಲೂಕಿನ ಹಲಕಿ ಗ್ರಾಮದ 200 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಬೆಂಕಿ ತಗುಲಿ ಸುಮಾರು 20 ಹೆಕ್ಟೇರ್‌ಗೂ ಅಧಿಕ ಅರಣ್ಯ ನಾಶವಾಗಿದೆ. ಅರಣ್ಯ ಸಿಬ್ಬಂದಿ ತ್ವರಿತವಾಗಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಕಾಡು ಪ್ರಾಣಿಗಳ ಬೇಟೆ ನೆಪದಲ್ಲಿ ಪದೇ ಪದೇ ಬೆಂಕಿ ಹಚ್ಚಿ ಅರಣ್ಯ ನಾಶ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಹನಮಂತ ಫಕ್ಕೀರಪ್ಪ ಕೊಟ್ರೆನ್ನವರ (65) ಬಂಧಿತ ಆರೋಪಿ.
ಮೂಲತಃ ಹಲಕಿ ಗ್ರಾಮದವನಾದ ಆರೋಪಿ ಹನಮಂತ ರಾತ್ರಿ ವೇಳೆ ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಬೆಂಕಿ ಹಚ್ಚಿ, ತಂತಿ ಬಳಸಿ ವನ್ಯ ಪ್ರಾಣಿಗಳ ಬೇಟೆಯಾಡುವುದನ್ನೇ ಕಸುಬಾಗಿಸಿ ಕೊಂಡಿದ್ದನು. ಸಿಬ್ಬಂದಿ ವಿಚಾರಿಸಿದಾಗ ಜೇನು ಬಿಡಿಸಲು ಬಂದಿರುವುದಾಗಿ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದನು. ಆಗಾಗ್ಗೆ ಬೆಂಕಿ ತಗುಲಿರುವದನ್ನು ಗಮನಿಸಿದ ಇಲಾಖೆ ವ್ಯವಸ್ಥಿತವಾದ ತನಿಖೆಯೊಂದಿಗೆ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಅವಘಡದಲ್ಲಿ ಕೆಲ ವನ್ಯ ಪ್ರಾಣಿಗಳು ಸುಟ್ಟು ಹೋಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಗೋಕಾಕ ವಿಭಾಗದ ಆಂಥೋನಿ ಮರಿಯಪ್ಪ, ರಾಜೇಶ್ವರಿ ಈರನಟ್ಟಿ, ಸವದತ್ತಿ ವಲಯ ಅರಣ್ಯಾ ಧಿಕಾರಿ ಶಂಕರ ಅಂತರಗಟ್ಟಿ ನೇತೃತ್ವದಲ್ಲಿ ಎಸ್.ಬಿ.ಹಟ್ಟೆನ್ನವರ, ಎಚ್.ಬಿ. ದಿಡಗನ್ನವರ, ಸೋಮನಿಂಗ ಕೊಪ್ಪದ, ನಾಗಪ್ಪ ಶೆಳ್ಳೆಮ್ಮಿ ಪ್ರಕರಣ ಭೇದಿಸುವಲ್ಲಿ ಭಾಗಿಯಾಗಿದ್ದರು.
ಅರಣ್ಯಕ್ಕೆ ತಗುಲಿದ ಬೆಂಕಿ ಪತ್ತೆ ಮಾಡಲು ಕಳೆದ ವರ್ಷ ಇಲಾಖೆಯಿಂದ ಫ1ರ್ ಅಲರ್ಟ್ ಪೋರ್ಟಲ್ ಸಿದ್ಧಪಡಿಸಿದ್ದು, ಅವಘಡ ಸಂಭವಿಸುತ್ತಲೇ ಸೆಟ್‌ಲೈಟ್ ಮೂಲಕ ನೇರವಾಗಿ ದೂರ ಸಂವೇದಿ ಕೇಂದ್ರಕ್ಕೆ ಮಾಹಿತಿ ರವಾನೆಯಾಗುತ್ತದೆ. ಅಲ್ಲಿಂದ ಇಲಾಖೆಯ ಮುಖ್ಯ ಕಚೇರಿ, ಜಿಲ್ಲಾಧಿಕಾರಿ, ಆರ್‌ಎಫ್‌ಓಗಳಿಗೆ ತ್ವರಿತ ಮಾಹಿತಿ ಸಿಕ್ಕು ಬೆಂಕಿ ನಂದಿಸುವಲ್ಲಿ ಅನುಕೂಲವಾಗಿದೆ. ಪ್ರದೇಶವಾರು ಬೆಂಕಿ ಕಾವಲುಗಾರರನ್ನು ನೇಮಿಸಲಾಗಿದೆ ಎನ್ನುತ್ತಾರೆ ಆರ್‌ಎಫ್‌ಓ ಶಂಕರ ಅಂತರಗಟ್ಟಿ.