Advertisement

ಬಡ್ಡಿ ಆಮೀಷವೊಡ್ಡಿ ವಂಚಿಸಿದವರ ಬಂಧಿಸಿ

03:11 PM Jun 23, 2019 | Team Udayavani |

ತುಮಕೂರು: ನಗರದ ಅಲ್ಪಸಂಖ್ಯಾತ ಕಡು ಬಡವರಿಗೆ 600 ಕೋಟಿ ರೂ.ಗೂ ಹೆಚ್ಚು ವಂಚಿಸಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಪೊಲೀಸರು ಬಂಧಿಸಬೇಕು. ನೆರವು ನೀಡಿದವರನ್ನು ಬಂಧಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸ ಬೇಕೆಂದು ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ ಆಗ್ರಹಿಸಿದರು. ಮಹ್ಮದ್‌ ಅಸ್ಲಾಂ ಎಂಬಾತ ಈಝಿಮೈಂಡ್‌ ಇಂಡಿಯಾ ಸಂಸ್ಥೆ ಹೆಸರಿನಲ್ಲಿ ಹೆಚ್ಚಿನ ಬಡ್ಡಿ ಆಮೀಷ ವೊಡ್ಡಿ 500ರಿಂದ 600 ಕೋಟಿ ರೂ. ಸಂಗ್ರಹಿಸಿ ಪರಾರಿಯಾಗಿದ್ದಾನೆ ಎಂದು ಶನಿವಾರ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದರು.

Advertisement

ವಿವಿಧೆಡೆಗಳಿಂದ ಹಣ ಸಂಗ್ರಹ: ಜನರಲ್ ಪ್ಲಾನ್‌, ಎಜುಕೇಷನ್‌ ಮತ್ತು ಮದುವೆ ಎಂಬ ಮೂರು ಯೋಜನೆಗಳಡಿ ತುಮಕೂರು, ಮಧುರೈ, ಕೇರಳ ಸೇರಿ ವಿವಿಧೆಡೆಗಳಿಂದ ಹಣ ಸಂಗ್ರಹಿಸಿದ್ದಾನೆ. ಶಾದಿ ಮಹಲ್ ಆವರಣದ ಎಚ್.ಎಂ.ಎಸ್‌ ಕಾಂಪ್ಲೆಕ್ಸ್ನಲ್ಲಿ ಕಚೇರಿ ಹೊಂದಿದ್ದ. 2017ರಲ್ಲಿ ಸಂಸ್ಥೆ ಪ್ರಾರಂಭಿಸಿದ ಈತ ಅಲ್ಪಸಂಖ್ಯಾತರ ಮುಖಂಡರ ಮೂಲಕ ಹಣ ಹೂಡಿಕೆ ಮಾಡಿಸಿದ್ದ. ಸಂಸ್ಥೆ ಪ್ರಾರಂಭವಾದಾಗಿನಿಂದ 2018 ಜುಲೈವರೆಗೂ ಹೂಡಿಕೆದಾರರಿಗೆ ಬಡ್ಡಿ ನೀಡಿ ನಂತರ ಕಂಪನಿ ಮುಚ್ಚಿ ಪರಾರಿಯಾಗಿದ್ದಾನೆ. ಸುಮಾರು 1000ಕ್ಕೂ ಹೆಚ್ಚು ಜನರು ಹಣ ಹೂಡಿದ್ದರು ಎಂದು ತಿಳಿಸಿದರು.

ವಿಶ್ವಾಸ ಗಳಿಸಿದ್ದ!: ಜನರಲ್ ಪ್ಲಾನ್‌ ತಿಂಗಳ ಯೋಜನೆಯಲ್ಲಿ ಗ್ರಾಹಕ ಒಮ್ಮೆ 50 ಸಾವಿರ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಮೂರು ಸಾವಿರ ಬಡ್ಡಿ ಮತ್ತು ಒಂದು ಲಕ್ಷ ಹೂಡಿಕೆ ಮಾಡಿದರೆ 5-6 ಸಾವಿರ, ಎರಡು ಲಕ್ಷಕ್ಕೆ 10-12 ಸಾವಿರ, ಐದು ಲಕ್ಷಕ್ಕೆ 25-30 ಸಾವಿರ ರೂ. ಬಡ್ಡಿ ನೀಡುವುದಾಗಿ ಒಡಂಬಡಿಕೆ ಮಾಡಿ 2017ರಿಂದ 2018ರ ಡಿಸೆಂಬರ್‌ವರೆಗೂ ಹೂಡಿಕೆಗೆ ತಕ್ಕಂತೆ ಹಣ ನೀಡಿ ವಿಶ್ವಾಸ ಗಳಿಸಿದ್ದ. ನಂತರ ಏಕಾಏಕಿ ಒಂದು ಲಕ್ಷ ರೂ. ಹೂಡಿಕೆ ಮಾಡಿದರೆ 4 ತಿಂಗಳು 10 ದಿನಕ್ಕೆ ಹತ್ತು ಲಕ್ಷ ರೂ. ನೀಡುವುದಾಗಿ ಹೇಳಿ ಗ್ರಾಹಕರಿಂದ ಹಣ ಸಂಗ್ರ ಹಿಸಿದ್ದ. ಈ ನಾಲ್ಕು ತಿಂಗಳ ಅಂತರದಲ್ಲಿ ಒಂದು ಲಕ್ಷದಿಂದ 50 ಲಕ್ಷದವರೆಗೂ ನೂರಾರು ಗ್ರಾಹಕರು ಹಣ ಹೂಡಿಕೆ ಮಾಡಿದ್ದು, ಮಾರ್ಚ್‌ನಲ್ಲಿ ಗ್ರಾಹಕರಿಗೆ ಹಣ ತಿರುಗಿಸದೆ ಹಣದೊಂದಿಗೆ ದುಬೈಗೆ ಪರಾರಿ ಯಾಗಿದ್ದಾನೆ ಎಂದು ದೂರಿದರು.

ಸಿಬಿಐ ತನಿಖೆಯಾಗಲಿ: ನೆರವಿಗೆ ಬಾರದ ಸರ್ಕಾರದ ವಿರುದ್ಧ ಪಕ್ಷಾತೀತ ಹೋರಾಡುತ್ತಿದ್ದೇನೆ. ತುಮಕೂರು ಪೊಲೀಸ್‌ ಇಲಾಖೆ ತನಿಖೆ ನಡೆಸಿದರೆ ಪರಿಹಾರ ಸಿಗುವುದಿಲ್ಲ. ಆದ್ದದರಿಂದ ಸಿಬಿಐ ತನಿಖೆಗೆ ನಡೆಯ ಬೇಕು ಎಂದು ಆಗ್ರಹಿಸಿದರು.

ಅಬ್ದುಲ್ ಹಲೀಂ ಇಕ್ಬಾಲ್, ಡಾ. ರಿಹಾನ್‌, ರಿಯಾಜ್‌ ಇವರುಗಳ ಜೊತೆಗೆ ಇದ್ದ ಮಹಮದ್‌ ಅಸ್ಲಾಂ ಆರ್‌ಐಆರ್‌ ಕಂಪನಿ ಬಿಟ್ಟು ಈಜಿಮೈಂಡ್‌ ಪ್ರಾರಂಭಿಸಿದ. ಈಗ ವಂಚಕ ಮಹಮದ್‌ ಅಸ್ಲಾಂ ಪರಾರಿಯಾಗಿರುವುದರಿಂದ ಪತ್ನಿ ಸೋಫಿಯಾ ಖಾನ ಮತ್ತು ಸಹೋದರ ಕಲೀಮುಲ್ಲಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದುವರೆಗೂ ಕಂಪನಿಯನ್ನು ಸೀಜ್‌ ಮಾಡಿಲ್ಲ. ಕೆಲ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಅಡ್ಡ ಬಂದಿದ್ದಾರೆಯೇ ಎಂಬ ಅನುಮಾನವಿದೆ ಎಂದು ದೂರಿದರು.

Advertisement

ಅಸ್ಲಾಂ ಪರಾರಿಯಾದ ಸುದ್ದಿ ಕೇಳಿ 14 ಲಕ್ಷ ಹೂಡಿಕೆ ಮಾಡಿದ್ದ ವ್ಯಕ್ತಿ ಮರಣ ಹೊಂದಿದ್ದು, ಒಬ್ಬ ಮಹಿಳೆ ಡಯಾಲಿಸಿಸ್‌ಗೆ ಕೂಡಿಟ್ಟಿದ್ದ ಹಣ ಕಳೆದು ಕೊಂಡಿರುತ್ತಾರೆ. ಹೀಗೆ 120ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಕೂಡಲೇ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡವರಿಗೆ ನ್ಯಾಯ ಒದಗಿಸಬೇಕು ಎಂದರು. ಮುಸ್ಲಿಂ ಮುಖಂಡರಾದ ನಿಸಾರ್‌ ಅಹ್ಮದ್‌ ಮೌಲಿ, ಸೈಯದ್‌ ನಿಮ್ರಾನ್‌, ಇಲಿಯಾಸ್‌, ಮಹ್ಮದ್‌ ಹಸೀಮ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next