Advertisement

ಭೀಮಾ ತೀರದ ಹಂತಕ ಭೈರಗೊಂಡ ಸೆರೆ

06:00 AM Jul 06, 2018 | Team Udayavani |

ವಿಜಯಪುರ: ಭೀಮಾ ತೀರದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡನನ್ನು ಕೊನೆಗೂ ಸಿಐಡಿ ಪೊಲೀಸರು ಗುರುವಾರ ಬೆಳಗ್ಗೆ ಬಂ ಧಿಸಿದ್ದು, ಇಂಡಿ ನ್ಯಾಯಾಲಯ ಜು.12ರವರೆಗೆ ಹೆಚ್ಚಿನ ತನಿಖೆಗಾಗಿಸಿಐಡಿ ವಶಕ್ಕೆ ನೀಡಿದೆ. 

Advertisement

ಚಡಚಣ ತಾಲೂಕಿನ ಕೆರೂರ ಗ್ರಾಮದ ತನ್ನ ಮನೆಯಲ್ಲಿ ಮಹಾದೇವ ಭೈರಗೊಂಡ ಅಡಗಿರುವ ಖಚಿತ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳತಂಡ ಸ್ಥಳೀಯ ಪೊಲೀಸರ ಭಾರಿ ಭದ್ರತೆಯಲ್ಲಿ ಗುರುವಾರ ನಸುಕಿನಲ್ಲೇ ದಾಳಿ ನಡೆಸಿತು. ಡಿಎಸ್‌ಪಿ ಬಸವರಾಜ ಅಂಗಡಿ ನೇತೃತ್ವದಲ್ಲಿ ರಚಿಸಲಾಗಿದ್ದ 7 ಸಿಪಿಐ ಹೊಂದಿದ್ದ ತಂಡ ಮನೆಗೆ ದಾಳಿ ನಡೆಸಿದಾಗ, ಯಾವುದೇ ಪ್ರತಿರೋಧ ತೋರದೇ ಮಹಾದೇವ
ಭೈರಗೊಂಡ ಶರಣಾದ.

ಬಂಧಿತ ಮಹಾದೇವ ಭೈರಗೊಂಡನನ್ನು ಭಾರಿ ಭದ್ರತೆಯಲ್ಲೇ ವಿಜಯಪುರ ನಗರಕ್ಕೆ ಕರೆತಂದ ಸಿಐಡಿ ಅ ಧಿಕಾರಿಗಳು, ಸ್ಥಳೀಯ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ತೀವ್ರ ವಿಚಾರಣೆ ನಡೆಸಿದರು. ಬೆಳಗ್ಗೆ 7ರಿಂದ ಮಧ್ಯಾಹ್ನ 3.30ರವರೆಗೆ ನಿರಂತರ ಸುಮಾರು 8 ಗಂಟೆಗೂ ಹೆಚ್ಚಿನ ಕಾಲ ವಿಚಾರಣೆ ನಡೆಸಿದ ಎಸ್ಪಿ ಆನಂದಕುಮಾರ ಅವರಿದ್ದ ಸಿಐಡಿ ಅ ಧಿಕಾರಿಗಳ ತಂಡ, ಮಹತ್ವದ ಮಾಹಿತಿ ಸಂಗ್ರಹಿಸಿದೆ.

ಪ್ರಾಥಮಿಕ ವಿಚಾರಣೆ ಬಳಿಕ ಮಧ್ಯಾಹ್ನ 4 ಗಂಟೆ ಸುಮಾರಿಗೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಹಾದೇವ ಭೈರಗೊಂಡ ವೈದ್ಯಕೀಯ ಪರೀಕ್ಷೆ ನಡೆಸಿದ ಸಿಐಡಿ ಅಧಿಕಾರಿಗಳು, ಭಾರಿ ಭದ್ರತೆಯಲ್ಲೇ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಈ ಹಂತದಲ್ಲಿ ಸದರಿ ಆರೋಪಿಯನ್ನು ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು, ಜು.12ರವರೆಗೆ ಆರೋಪಿಯನ್ನು ಸಿಐಡಿ ವಶಕ್ಕೆ ನೀಡಿದೆ.

ಈ ಮಧ್ಯೆ ಆರೋಪಿಯನ್ನು ಮತ್ತೆ ತಮ್ಮ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮತ್ತೆ ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿ ಗಂಗಾಧರ ಹತ್ಯೆಯ ಪ್ರಮುಖ ಸೂತ್ರಧಾರನಾಗಿರುವ ಕಾರಣ ತನಿಖಾ ತಂಡ, ಈಗಾಗಲೇ ಬಂಧಿತ ಆರೋಪಿಗಳು ನೀಡಿರುವ
ಹೇಳಿಕೆ ಆಧರಿಸಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ತಲೆಮರೆಸಿಕೊಂಡಿದ್ದ ಮಹಾದೇವ ಭೈರಗೊಂಡ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಬುಧವಾರವೇ ನ್ಯಾಯಾಲಯಕ್ಕೆ
ಶರಣಾಗಲು ನಿರ್ಧರಿಸಿದ್ದ. ಈ ಮಾಹಿತಿ ದೊರೆಯುತ್ತಲೇ ಇಂಡಿ ನ್ಯಾಯಾಲಯದ ಸುತ್ತ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಆಗಮಿಸಿದೇ ಭೂಗತ ಸ್ಥಳದಿಂದ ಸದ್ದಿಲ್ಲದೇ ತವರೂರು ಕೆರೂರು ಗ್ರಾಮಕ್ಕೆ ಆಗಮಿಸಿ, ತನ್ನ ಮನೆಯಲ್ಲಿ ಅಡಗಿದ್ದ. ಈ ಕುರಿತು ಖಚಿತ ಮಾಹಿತಿ ಆಧರಿಸಿ ಗುರುವಾರ ನಸುಕಿನಲ್ಲೇ ಸಿಐಡಿ ಅಧಿಕಾರಿಗಳು ಮನೆಗೆ ದಾಳಿ ನಡೆಸಿ ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next