Advertisement

ರಾಜಕೀಯ ಕೆಸರೆರಚಾಟ : ಡಿಎಸ್‌ಪಿ ದೇವೀಂದರ್‌ ಬಂಧನ ಕುರಿತು ಆರೋಪ, ಪ್ರತ್ಯಾರೋಪ

09:17 AM Jan 16, 2020 | Hari Prasad |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್‌ ಉಗ್ರರನ್ನು ತಮ್ಮ ಕಾರಿನಲ್ಲೇ ಕರೆದೊಯ್ಯುತ್ತಿದ್ದಾಗ ಡಿಎಸ್‌ಪಿ ದೇವೀಂದರ್‌ ಸಿಂಗ್‌ ಸಿಕ್ಕಿಬಿದ್ದಿರುವುದು ಈಗ ಕುತೂಹಲಕಾರಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ದೇವೀಂದರ್‌ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಕೆಣಕಿ ಕಾಂಗ್ರೆಸ್‌ ವಾಗ್ಧಾಳಿ ನಡೆಸಿದರೆ, ಬಿಜೆಪಿ ಕೂಡ ತಿರುಗೇಟು ನೀಡುವ ಮೂಲಕ ವಾಗ್ಯುದ್ಧವನ್ನು ತೀವ್ರಗೊಳಿಸಿದೆ.

Advertisement

ದೇವೀಂದರ್‌ ಸಿಂಗ್‌ಗೆ ಇರುವ ಉಗ್ರರ ಒಡನಾಟವನ್ನು ಕಳೆದ ವರ್ಷದ ಪುಲ್ವಾಮಾ ದಾಳಿಗೆ ಲಿಂಕ್‌ ಮಾಡಿರುವ ಕಾಂಗ್ರೆಸ್‌, 40 ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಪುಲ್ವಾಮಾ ದಾಳಿಯ ಹಿಂದೆ ದೊಡ್ಡ ಸಂಚಿರಬಹುದೇ ಎಂದು ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಪುಲ್ವಾಮಾ ದಾಳಿಯನ್ನು ಪಾಕಿಸ್ಥಾನ ನಡೆಸಿಲ್ಲ ಎಂದಾದರೆ, ಅದನ್ನು ಬೇರಾರು ನಡೆಸಿದರು ಎಂಬುದನ್ನು ಸೋನಿಯಾ ಹಾಗೂ ರಾಹುಲ್‌ ಸ್ಪಷ್ಟಪಡಿಸಲಿ’ ಎಂದಿದೆ. ಜತೆಗೆ, ಪುಲ್ವಾಮಾ ದಾಳಿ ಕುರಿತು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಅವರು ಸಮವಸ್ತ್ರ ಧರಿಸಿ ಕಾಶ್ಮೀರದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್‌ ಕಿಡಿಕಾರಿದ್ದಾರೆ.


ಶೌರ್ಯ ಪದಕದ ಸುದ್ದಿ ಸುಳ್ಳು: ಇದೇ ವೇಳೆ, ದೇವೀಂದರ್‌ ಸಿಂಗ್‌ಗೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿಯವರ ಶೌರ್ಯ ಪದಕ ನೀಡಿ ಗೌರವಿಸಿತ್ತು ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರಪತಿಯವರ ಶೌರ್ಯ ಪದಕವನ್ನು ಇದೇ ಹೆಸರಿನ ಬೇರೆ ಅಧಿಕಾರಿಗೆ ನೀಡಲಾಗಿತ್ತು.

ದೇವೀಂದರ್‌ ಸಿಂಗ್‌ಗೆ 2018ರ ಸ್ವಾತಂತ್ರ್ಯೋತ್ಸವದ ವೇಳೆ ಜಮ್ಮು ಮತ್ತು ಕಾಶ್ಮೀರ ಸರಕಾರ ಶೌರ್ಯ ಪದಕ ನೀಡಿ ಗೌರವಿಸಿತ್ತು ಎಂದು ಪೊಲೀಸರು ಟ್ವೀಟ್‌ ಮಾಡಿದ್ದಾರೆ. 2018ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸರಕಾರ ಅಸ್ತಿತ್ವದಲ್ಲಿ ಇರಲಿಲ್ಲ. ಆಗ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು.

ಮತ್ತೂಬ್ಬ ಅಧಿಕಾರಿ ಮೇಲೆ ಕಣ್ಣು: ಡಿಎಸ್‌ಪಿ ದೇವೀಂದರ್‌ ಸಿಂಗ್‌ ಬಂಧನದ ಬೆನ್ನಲ್ಲೇ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮತ್ತೂಬ್ಬ ಪ್ರಮುಖ ಪೊಲೀಸ್‌ ಅಧಿಕಾರಿಯೊಬ್ಬರ ಮೇಲೆ ಕಣ್ಣಿಡಲಾಗಿದೆ.

Advertisement

ದೇವೀಂದರ್‌ ಜತೆ ನಿಕಟ ಸಂಬಂಧ ಹೊಂದಿದ್ದ ಹೆಚ್ಚುವರಿ ಪ್ರಧಾನ ನಿರ್ದೇಶಕ (ಎಡಿಜಿ) ಹುದ್ದೆಯ ಅಧಿಕಾರಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್‌ ನೌ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next