ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ (Robin Uttappa) ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಭವಿಷ್ಯನಿಧಿ (PF) ವಂಚನೆ ಆರೋಪದ ಮೇಲೆ ಪಿಎಫ್ ಪ್ರಾದೇಶಿಕ ಆಯುಕ್ತ ಷಡಕ್ಷರಿ ಗೋಪಾಲ್ ರೆಡ್ಡಿ ವಾರಂಟ್ ಹೊರಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪುಲಕೇಶಿನಗರ ಪೊಲೀಸರಿಗೆ ಸೂಚಿಸಿದ್ದಾರೆ.
ಸೆಂಚುರೀಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯನ್ನು ನಿರ್ವಹಿಸುತ್ತಿದ್ದ ಉತ್ತಪ್ಪ ಅವರು ನೌಕರರ ವೇತನದಿಂದ ಪಿಎಫ್ ಕೊಡುಗೆಗಳನ್ನು ಕಡಿತಗೊಳಿಸಿದ್ದಾರೆ. ಆದರೆ ಮೊತ್ತವನ್ನು ಠೇವಣಿ ಮಾಡಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 23 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಉತ್ತಪ್ಪ ವಿರುದ್ದ ಆರೋಪ ಮಾಡಲಾಗಿದೆ.
ಡಿಸೆಂಬರ್ 4 ರಂದು ಬರೆದ ಪತ್ರದಲ್ಲಿ ಕಮಿಷನರ್ ರೆಡ್ಡಿ ಅವರು ವಾರಂಟ್ ಕಾರ್ಯಗತಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ, ಉತ್ತಪ್ಪ ಅವರ ಹಿಂದಿನ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ವರದಿಯಾದ ಕಾರಣ ವಾರಂಟ್ ಪಿಎಫ್ ಕಚೇರಿಗೆ ಹಿಂದೆ ಬಂದಿದೆ. ಉತ್ತಪ್ಪ ಅವರು ಪುಲಕೇಶಿನಗರ ನಿವಾಸದಲ್ಲಿ ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ಹೊರಡಿಸಲಾಗಿದ್ದ ವಾರಂಟ್ ವಾಪಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು ಸದ್ಯ ತನ್ನ ಕುಟುಂಬದೊಂದಿಗೆ ದುಬೈನಲ್ಲಿ ವಾಸವಿದ್ದಾರೆ ಎಂದು ವರದಿಯಾಗಿದೆ.
ಬಾಕಿ ಪಾವತಿಸಲು ವಿಫಲವಾದ ಕಾರಣ ಪಿಎಫ್ ಕಚೇರಿಯು ಸಂತ್ರಸ್ತ ಕಾರ್ಮಿಕರ ಖಾತೆಗಳನ್ನು ಸೆಟಲ್ ಮಾಡುವುದನ್ನು ತಡೆಯುತ್ತದೆ ಎಂದು ವಾರಂಟ್ ನಲ್ಲಿ ಸೂಚಿಸಲಾಗಿದೆ. ರಾಬಿನ್ ಉತ್ತಪ್ಪ ಅವರನ್ನು ಬಂಧಿಸಿ ಡಿಸೆಂಬರ್ 27ರೊಳಗೆ ವಾರೆಂಟ್ ವಾಪಸ್ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.