ಅಮರಾವತಿ, ಆಂಧ್ರ ಪ್ರದೇಶ : ಗೋದಾವರಿ ನದಿಯ ಬಬ್ಲಿ ಪ್ರಾಜೆಕ್ಟ್ ವಿರುದ್ಧದ ಆಂದೋಲನಕ್ಕೆ ಸಂಬಂಧಿಸಿದ 2010ರ ಕೇಸಿಗೆ ಸಂಬಂಧಿಸಿ ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಮತ್ತು ಇತರ 15 ಮಂದಿಯ ವಿರುದ್ಧ ಮಹಾರಾಷ್ಟ್ರದ ಸ್ಥಳೀಯ ನ್ಯಾಯಾಲಯವೊಂದು ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಚಂದ್ರಬಾಬು ನಾಯ್ಡು ಮತ್ತು ಇತರ 15 ಮಂದಿಯನ್ನು ಬಂಧಿಸಿ ಸೆ.21ರಂದು ತನ್ನ ಮುಂದೆ ಹಾಜರುಪಡಿಸಬೇಕೆಂದು ನಾಂದೇಡ್ ಜಿಲ್ಲೆಯ ಧರ್ಮಬಾದ್‌ನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಎನ್ ಆರ್ ಗಜಭಿಯೇ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಬಬ್ಲಿ ಯೋಜನೆಯ ತಾಣದಲ್ಲಿ 2010ರಲ್ಲಿ ನಾಯ್ಡು ಮತ್ತು ಇತರರು ಪ್ರತಿಭಟನೆ ನಡೆಸಿ ಬಂಧಿತರಾಗಿ ಪುಣೆ ಜೈಲು ಸೇರಿದ್ದರು. ಬಬ್ಲಿ ಯೋಜನೆಯಿಂದ ಆಂಧ್ರ ಪ್ರದೇಶದಲ್ಲಿನ ತಗ್ಗು ಪ್ರದೇಶಗಳಿಗೆ ತೀವ್ರ ಬಾಧೆ ಉಂಟಾಗುವುದೆಂದು ಆರೋಪಿಸಿ ಅವರು ಪ್ರತಿಭಟನೆ ನಡೆಸಿದ್ದರು. ಅಂದು ವಿರೋಧ ಪಕ್ಷದಲ್ಲಿದ್ದ ಈ ಬಂಧಿತರಲ್ಲಿ ಯಾರೂ ಜಾಮೀನು ಪಡೆದಿರಲಿಲ್ಲ; ಆದರೂ ಅನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಮಹಾರಾಷ್ಟ್ರ ನಿವಾಸಿಗಳು ದಾಖಲಿಸಿದ್ದ ಅರ್ಜಿಯ ಪ್ರಕಾರ ನ್ಯಾಯಾಲಯವು ಜು.5ರಂದು ಹೊರಡಿಸಿದ್ದ ಅರೆಸ್ಟ್ ವಾರಂಟನ್ನು ಆಗಸ್ಟ್ 16ರಂದು ಜಾರಿ ಮಾಡುವುದಿತ್ತು. ಆದರೆ ಅದನ್ನು ಅನಂತರ ಮಾರ್ಪಡಿಸಲಾಗಿ ಸೆ.21ಕ್ಕೆ ನಿಗದಿಸಲಾಯಿತು.
ನಾಯ್ಡು ಅವರಲ್ಲದೆ ಅಂದು ಕೇಸು ದಾಖಲಿಸಲ್ಪಟ್ಟಿದ್ದ ಜಲಸಂಪನ್ಮೂಲ ಸಚಿವ ದೇವಿನೇನಿ ಉಮಾಮಹೇಶ್ವರ ರಾವ್, ಸಮಾಜ ಕಲ್ಯಾಣ ಸಚಿವ ಎನ್ ಆನಂದ ಬಾಬು, ಮಾಜಿ ಶಾಸಕ ಜಿ ಕಮಲಾಕರ್ (ಇವರೆಲ್ಲ ಅನಂತರ ಟಿಆರ್‌ಎಸ್ ಸೇರಿದರು) ಅಂದು ತೆಲುಗು ದೇಶಂ ಪಕ್ಷದ ಕಾರ್ಯಕರ್ತರಾಗಿದ್ದರು.