ಬೆಂಗಳೂರು: ವಿದೇಶದಿಂದ ಹಿಂತಿರುಗುತ್ತಿದ್ದಂತೆ ಸಂಸದ ಪ್ರಜ್ವಲ್ ರೇವಣ್ಣ ಬಂಧನ ಖಚಿತವಾಗಿದ್ದು, ಈ ಸಂಬಂಧದ ಸಿದ್ಧತೆಗಳು ಕೂಡ ಸರಕಾರದ ಮಟ್ಟದಲ್ಲಿ ಶುರುವಾಗಿವೆ.
ಪ್ರಜ್ವಲ್ ವಿರುದ್ಧ ವಾರಂಟ್ ಜಾರಿಯಾಗಿರುವುದರಿಂದ ಬಂಧಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯವರು ಪ್ರಕ್ರಿಯೆ ಆರಂಭಿಸಿದ್ದಾರೆ.
ಈಗಾಗಲೇ ನಿಗದಿಯಾದ ದಿನದಂದು ಆಗಮಿಸುತ್ತಿದ್ದಂತೆ ಬಂಧನ ಆಗಲಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಮಾಹಿತಿ ನೀಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ ಎಂಬುದು ಬರುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅಂತಹವರನ್ನು ಬಂಧಿಸಲಾಗುತ್ತದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬುದಕ್ಕಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ಯಾರು ಭಾಗಿಯಾಗಿರುವುದು ಕಂಡುಬರುತ್ತದೆಯೋ ಅಂತಹವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಈಗಾಗಲೇ ಪ್ರಕರಣದಲ್ಲಿ 11ರಿಂದ 12 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬೆಳ್ಳೂರು ಕ್ರಾಸ್‌ನಲ್ಲಿ ನಡೆದ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ವಹಿಸಿದ ಜವಾಬ್ದಾರಿಯನ್ನು ಅಧಿಕಾರಿಗಳು ಮಾಡದೆ ಇದ್ದಾ ಗ, ಅದರಿಂದ ಬೇರೆ ಬೇರೆ ರೀತಿಯ ತೊಂದರೆಗಳಾದಾಗ ಅಮಾನತುಗೊಳಿಸಲಾಗುತ್ತದೆ. ಇಲಾಖೆ ವಿಚಾರಣೆ ನಡೆಯುತ್ತದೆ ಎಂದರು.