Advertisement

ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

05:03 PM May 27, 2021 | keerthan |

ಬೆಂಗಳೂರು: ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಎಸ್.ಐ.ಟಿ ಮುಖ್ಯಸ್ಥರು ರಜೆ ಮೇಲೆ ತೆರಳಿ, ತನಿಖೆ ಸ್ಥಗಿತಗೊಂಡಿರುವುದರಿಂದ, ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆಯನ್ನು ಮುಂದುವರೆಸಬೇಕು ಹಾಗೂ ಆರೋಪಿ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅತ್ಯಾಚಾರ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಯನ್ನು ಭೇಟಿಯಾಗಿ, ಚರ್ಚೆ ನಡೆಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದು, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಯಾರೆಲ್ಲಾ ಮಂತ್ರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡುತ್ತಿದ್ದಾರೆ ಅವರೆಲ್ಲರ ಹೆಸರುಗಳನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು ಮತ್ತು ಅಂಥವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:1 ಲಕ್ಷ ರೂ.ಸಂಬಳ ಇದೆ, ನಿಮ್ಮ ಮಗಳನ್ನ ನನಗೆ ಕೊಡಿ: ಶಾರುಖ್ ಪುತ್ರಿಗೆ ಮದುವೆ ಪ್ರಪೋಸಲ್

ಅತ್ಯಾಚಾರ ಪ್ರಕರಣ ದಾಖಲಾಗಿ, ಸಂತ್ರಸ್ತ ಯುವತಿ ವಿಶೇಷ ತನಿಖಾ ತಂಡದ ಎದುರು ರಮೇಶ್ ಜಾರಕಿಹೊಳಿ ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿದ ಮೇಲೆಯೂ ಜಾರಕಿಹೊಳಿಯನ್ನು ಪೊಲೀಸರು ಏಕೆ ಬಂಧಿಸಿಲ್ಲ? ಅತ್ಯಾಚಾರ ಆರೋಪಿಯೊಬ್ಬ ಸ್ವಚ್ಛಂದವಾಗಿ ಓಡಾಡಿಕೊಂಡಿರಲು ರಾಜ್ಯ ಸರ್ಕಾರದ ಕೃಪಾಕಟಾಕ್ಷ ಕಾರಣವಲ್ಲದೆ ಇನ್ನೇನು? ಅತ್ಯಾಚಾರ ಆರೋಪಿಯಾದ ರಮೇಶ್ ಜಾರಕಿಹೊಳಿ ಕಳೆದ ಶನಿವಾರ ರಾಜ್ಯದ ಗೃಹ ಸಚಿವರನ್ನು ಭೇಟಿಮಾಡಿ, ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದ್ದಾರೆ. ಅತ್ಯಾಚಾರ ಆರೋಪಿಯೊಬ್ಬ ಗೃಹ ಸಚಿವರನ್ನು ಭೇಟಿಮಾಡಿ, ಮಾತುಕತೆ ನಡೆಸಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎಂದು ಕಿಡಿಕಾರಿದರು.

Advertisement

ಸಿ.ಆರ್.ಪಿ.ಸಿ ಸೆಕ್ಷನ್ 53(A) ಪ್ರಕಾರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಒಳಪಡಿಸಬೇಕು ಎಂದಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ ಇಷ್ಟು ದಿನ ಕಳೆದರೂ ಈ ವರೆಗೆ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸದಿರಲು ಕಾರಣವೇನು ಎಂದು ಅವರು ಪ್ರಶ್ನಿಸಿದರು.

ತನ್ನ ರಾಸಲೀಲೆ ಸಿಡಿ ಹೊರಬಂದಾಗ ಸಿಡಿಯಲ್ಲಿರುವುದು ನಾನಲ್ಲ, ನನಗೂ ವೀಡಿಯೋಗೂ ಸಂಬಂಧವೇ ಇಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ, ನಿನ್ನೆ ಸಿಡಿ ಯಲ್ಲಿರುವುದು ನಾನೇ ಎಂದು ಎಸ್.ಐ.ಟಿ ಮುಂದೆ ಒಪ್ಪಿಕೊಂಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅಂದರೆ ಇದು ಅತ್ಯಾಚಾರವನ್ನು ಒಪ್ಪಿಕೊಂಡಂತೆ ಅಲ್ಲವೇ? ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳುವ ಮೊದಲೇ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಸೌಮೇಂಧು ಮುಖರ್ಜಿ ಅವರನ್ನು ಸರ್ಕಾರ ರಜೆಯ ಮೇಲೆ ಕಳುಹಿಸಿದೆ. ಇದು ರಾಜ್ಯ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ತನಿಖೆಯನ್ನು ವಿಳಂಬ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next