Advertisement

Hunsur: ನಾಗರಹೊಳೆಯಲ್ಲಿ ಗುಂಡಿಕ್ಕಿ ಅಪರೂಪದ ಕೂರ ಭೇಟೆಯಾಡಿದ್ದ ಇಬ್ಬರ ಬಂಧನ; ಓರ್ವ ಪರಾರಿ

05:02 PM May 14, 2024 | Team Udayavani |

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ಕೂರ (ಮೌಸ್‌ಡೀರ್)ನನ್ನು ಬೇಟೆಯಾಡಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Advertisement

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ತಟ್ಟಳ್ಳಿ ಹಾಡಿಯ ಜೆ.ಎಂ.ಮಂಜು, ಪಿರಿಯಾಪಟ್ಟಣ ತಾಲೂಕಿನ ಅಬ್ಬಳತಿ ಗ್ರಾಮದ ಮೋಹನ್ ಅಲಿಯಾಸ್ ತಮ್ಮಣ್ಣ ಬಂಧಿತರು.

ಆರೋಪಿಗಳಿಂದ ಹತ್ಯೆಗೈದಿದ್ದ ಕೂರದ ಕಳೆಬರ, ಕೃತ್ಯಕ್ಕೆ ಬಳಸಿದ್ದ ಬ್ಯಾಗ್ ಮತ್ತಿತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.

ಉಳಿದಂತೆ ಚನ್ನಂಗಿ ಗ್ರಾಮದ ದಿಡ್ಡಳ್ಳಿ ಹಾಡಿಯ ಜಯಂತ್ ಅಲಿಯಾಸ್ ಪುಟ್ಟಣ್ಣ ಕೃತ್ಯಕ್ಕೆ ಬಳಸಿದ್ದ ಬಂದೂಕಿನೊಂದಿಗೆ ಪರಾರಿಯಾಗಿದ್ದಾನೆ.

ಉದ್ಯಾನದ ಆನೆಚೌಕೂರು ವನ್ಯಜೀವಿ ವಲಯದ ಬಫರ್ ಝೋನ್ ಪ್ರದೇಶದ ಚನ್ನಂಗಿ ಶಾಖೆಯ ಕರ್ಲುಬಾಣೆ ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಿಬ್ಬಂದಿಗಳು ಗಸ್ತಿನಲ್ಲಿದ್ದ ವೇಳೆ ಗುಂಡಿನ ಶಬ್ದ ಕೇಳಿ ಬಂದಿದೆ. ತಕ್ಷಣವೇ ಶಬ್ದ ಬಂದ ಕಡೆ ದೌಡಾಯಿಸಿದ ವೇಳೆ ಆರೋಪಿಗಳು ಕತ್ತಲಿನಲ್ಲಿ ಪರಾರಿಯಾಗಲೆತ್ನಿಸಿದ್ದಾರೆ.

Advertisement

ಹರ್ಷ ಕುಮಾರ್‌ ಚಿಕ್ಕನರಗುಂದ ಹಾಗೂ ಎಸಿಎಫ್ ದಯಾನಂದ ಮಾರ್ಗದರ್ಶನದಲ್ಲಿ ಸಿನಿಮೀಯ ಮಾದರಿಯಲ್ಲಿ ಬೆನ್ನಟ್ಟಿದ ಸಿಬ್ಬಂದಿಗಳು ಇಬ್ಬರು ಆರೋಪಿಗಳನ್ನು ಮಾಂಸ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊರ್ವ ಆರೋಪಿ ಪರಾರಿಯಾಗಿದ್ದು ಬಂಧನಕ್ಕೆ  ಕ್ರಮವಹಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್‌ಚಿಕ್ಕನರಗುಂದ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್.ಎಫ್.ಓ.ಡಿ.ದೇವರಾಜು, ಡಿಆರ್‌ಎಫ್‌ಓ ಚನವೀರೇಶಗಾಣಗೇರ, ಗಸ್ತು ಅರಣ್ಯಪಾಲಕರಾದ ತಿಮ್ಮಣ್ಣ, ಶಿವು ಮತ್ತಿತರ ಸಿಬ್ಬಂದಿ ಬಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next