ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿಲುಗಡೆ ಮಾಡಿದ್ದ ಹಿಟಾಚಿ ಯಂತ್ರ ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಗಣಿಯ ಸಚ್ಚಿದಾನಂದ (45) ಹಾಗೂ ಶಕ್ತಿವೇಲು (40) ಬಂಧಿತರು.
ಇತರೆ ಇಬ್ಬರು ಆರೋಪಿಗಳು ತಲೆಮರೆಸಿ ಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ಗಳು ಜುಲೈ 17ರಂದು ತಡರಾತ್ರಿ ಹಿಟಾಚಿ ಕಳವು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಲಿಫ್ಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯ ಗುತ್ತಿಗೆಯನ್ನು ಗೋವಿಂದರಾಜು ಎಂಬುವರು ಪಡೆದುಕೊಂಡಿದ್ದರು. ಅವರೊಂದಿಗೆ ಆರೋಪಿಗಳು ಕೂಡ ಜಂಟಿ ಮಾಲೀಕತ್ವದಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಗೋವಿಂದರಾಜು ಮತ್ತು ಆರೋಪಿಗಳ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ಆಗಿತ್ತು. ಅದರಿಂದ ಆಕ್ರೋಶಗೊಂಡ ಆರೋಪಿಗಳು ಹಿಟಾಚಿ ಕದ್ದೊಯ್ದು ಬೇರೆಡೆ ಮಾರಾಟಕ್ಕೆ ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 17ರ ತಡರಾತ್ರಿ 1 ಗಂಟೆ ಸುಮಾರಿಗೆ ಲಾರಿ ಸಮೇತ ಆರೋಪಿಗಳು ಬಂದಿದ್ದು, ಅದನ್ನು ಪ್ರಶ್ನಿಸಿದ್ದ ಕೋರ್ಟ್‌ನ ಭದ್ರತಾ ಸಿಬ್ಬಂದಿಗೆ ಹಿಟಾಚಿ ನಮ್ಮದೇ ಕಾಮಗಾರಿ ಮುಕ್ತಾಯವಾಗಿರುವುದರಿಂದ ಬೇರೆ ಕಡೆಗೆ ಕೊಂಡೊಯ್ಯಬೇಕು ಎಂದು ಸುಳ್ಳು ಹೇಳಿದ್ದಾರೆ.
ಪ್ರತಿದಿನ ಕಾಮಗಾರಿ ಸ್ಥಳದಲ್ಲೂ ಆರೋಪಿಗಳನ್ನು ನೋಡುತ್ತಿದ್ದರಿಂದ ಸೆಕ್ಯೂರಿಟಿ ಗಾರ್ಡ್ ಲಾರಿಯನ್ನು ಒಳಗಡೆ ಬಿಟ್ಟಿದ್ದಾನೆ. ಬಳಿಕ ಆರೋಪಿಗಳು ಲಾರಿಯಲ್ಲಿ ಹಿಟಾಚಿ ಯಂತ್ರವನ್ನು ಹಾಕಿಕೊಂಡು ಪರಾರಿಯಾಗಿದ್ದರು. ಮರು ದಿನ ಬೆಳಿಗ್ಗೆ ಕಾರ್ಮಿಕರು ಬಂದು ಕಾಮಗಾರಿ ನಡೆಸಲು ಮುಂದಾದ ವೇಳೆ ಹಿಟಾಚಿ ಕಳ್ಳತನವಾಗಿರುವುದು ಗೊತ್ತಾಗಿದೆ. ಆರೋಪಿಗಳು ಹಿಟಾಚಿ ಕಳವು ಮಾಡುತ್ತಿರುವುದು ನ್ಯಾಯಾಲಯದ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಈ ಸಂಬಂಧ ಗೋವಿಂದರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು, ಹಿಟಾಚಿ ಮಾಲೀಕನ ನಡುವೆ ಜಗಳ: ಹಿಟಾಚಿ ಮಾಲೀಕರು ಹಾಗೂ ಆರೋಪಿಗಳ ನಡುವೆ 15 ವರ್ಷಗಳ ಸ್ನೇಹವಿತ್ತು. ಆರೋಪಿಗಳು ಕೂಡ ಹಿಟಾಚಿ ಹೊಂದಿದ್ದಾರೆ. ಹಣಕಾಸಿನ ವ್ಯವಹಾರವೂ ಇಬ್ಬರ ನಡುವೆ ಇತ್ತು. ಈ ನಡುವೆ ಹಣಕಾಸಿನ ವಿಚಾರದಲ್ಲಿ ಆರೋಪಿಗಳು ಹಾಗೂ ಗೋವಿಂದರಾಜು ನಡುವೆ ಜಗಳ ನಡೆದಿತ್ತು. ಅದೇ ದ್ವೇಷದಿಂದ ಹಿಟಾಚಿ ಯಂತ್ರ ಕಳವು ಮಾಡಿ ಮಾರಾಟಕ್ಕೆ ಮುಂದಾಗಿದ್ದರು. ಜಿಗಣಿಯ ಹೋಟೆಲ್ ವೊಂದರಲ್ಲಿ ಕುಳಿತು ಚರ್ಚಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.