ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳು 22 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಅಣ್ಣಾದೊರೈ (42), ವೀರಮಲೈ ಅಲಿಯಾಸ್ ಕುಮಾರ್(40) ಮತ್ತು ಬಾಬು (34) ಬಂಧಿತರು. ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಇತ್ತೀಚೆಗೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಶಾಲೆಯೊಂದರ ಬೀಗ ಮುರಿದು ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೂವರು ಒಂದೇ ಊರಿನವರಾಗಿದ್ದು, ಕಳ್ಳತನ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದಾರೆ. 2001ರಲ್ಲಿ ಫ್ರೇಜರ್‌ಟೌನ್‌ನಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಆ ನಂತರವು ನಗರದ ಐದಾರು ಠಾಣೆಗಳು ಹಾಗೂ ಕೋಲಾರ, ದಾವಣಗೆರೆ ಸೇರಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿದ್ದಾರೆ. ಕದ್ದ ವಸ್ತುಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದರು. ಅದನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ, ಯಾವುದೇ ಸುಳಿವು ಸಿಗದಂತೆ ಪರಾರಿಯಾಗುತ್ತಿದ್ದರು. ಆರೋಪಿಗಳು ಬೆರಳಚ್ಚು ಪತ್ತೆಯಾಗಿದ್ದರೂ, ಮುಖ ಚಹರೆ ಬಗ್ಗೆ ಒಂದು ಸುಳಿವು ಇರಲಿಲ್ಲ. ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ ಬಳಿಕ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಸಿದಾಗ, ಹುಳಿಮಾವು ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಕಳವು ಮಾಡಿ ಸೇಲಂಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆದಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಬಂಧನದಿಂದ ಜ್ಞಾನಭಾರತಿ, ಹುಳಿಮಾವು, ಫ್ರೆಜರ್‌ಟೌನ್, ಹೆಣ್ಣೂರು, ರಾಜಾನುಕುಂಟೆ, ಕೋಣನಕುಂಟೆ, ಕೆ.ಆರ್.ಪುರ, ಬಾಗಲೂರು, ಕೋಲಾರ ಹಾಗೂ ದಾವಣಗೆರೆ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.