ಹರಪನಹಳ್ಳಿ: ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪಟ್ಟಣದ ಪೋಲಿಸರು ಯಶಸ್ವಿಯಾಗಿದ್ದಾರೆ.
ಬಂಧಿತರು ಆಂಧ್ರಪ್ರದೇಶದ ಜಿ.ಕುಪ್ಪಂ ಗ್ರಾಮದ ವೆಂಕಟರಮಣ(37),, ಎಂ.ಪ್ರಭುದಾಸ(34) ಕಪ್ಪರಾಲತಿಪ್ಪ ಗ್ರಾಮದ ಕೊಂಡಯ್ಯ(34) ಎನ್ನುವವರಾಗಿದ್ದಾರೆ.
ಇತ್ತೀಚೆಗೆ ಪಟ್ಟಣದಲ್ಲಿ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬರುತ್ತಿದ್ದ ಗ್ರಾಹಕರನ್ನು ಹಿಂಬಾಲಿಸಿ ಅವರ ಗಮನ ಬೆರೆಡೆ ಸೆಳೆದು ಹಣವನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣ ವರದಿಯಾಗಿದ್ದು, ಅಕ್ಟೋಬರ್ 2022 ರಿಂದ ಇಲ್ಲಿಯವರೆಗೆ ಒಟ್ಟು 4 ಕಡೆ ಕಳ್ಳತನ ಮಾಡಿರುವುದಾಗಿ ಕಳ್ಳರು ಒಪ್ಪಿಕೊಂಡಿದ್ದು, 9 ಲಕ್ಷ ಹಣ ಮತ್ತು ಕಳ್ಳತನಕ್ಕೆ ಬಳಸಿದ 2 ಬೈಕ್‌ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸೂಚನೆ ಮೇರಿಗೆ, ಡಿವೈಎಸ್‌ಪಿ ವಿ.ಎಸ್.ಹಾಲಮೂರ್ತಿರಾವ್, ಹಾಗೂ ಡಿಸಿಆರ್‌ಬಿ ಡಿವೈಎಸ್‌ಪಿ ಮಾಲತೇಶ ಎಂ.ಕೂನ್‌ಬೇವ ಇವರ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ ಎಂ.ಕಮ್ಮಾರ ನೇತೃತ್ವದಲ್ಲಿ ಪಿಎಸ್‌ಐ ಶಾಂತಮೂರ್ತಿ, ಸಿಬಂದಿ ರವಿ ದಾದಾಪುರ, ಆನಂದ, ಮನೋಹರಪಾಟೀಲ್, ವಾಸುದೇವನಾಯ್ಕ, ಕುಮಾರನಾಯ್ಕ ರವರ ವಿಶೇಷ ತಂಡ ಅಂತರ ರಾಜ್ಯ ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಇವರ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.