ಜೋಯಿಡಾ: ತಾಲೂಕಿನಲ್ಲಿ ಕಳೆದ ಜು.25 ಮತ್ತು 27 ರಂದು ನಾಗೋಡಾದ ಖಾಸಗಿ ಫಾರಂ ಹೌಸ್‌ನಲ್ಲಿ 6 ಶ್ರೀಗಂಧದ ಮರ ಹಾಗೂ ಅಲ್ಲಿನ ಸಮೀಪದ ಅರಣ್ಯದಲ್ಲಿನ ಮೂರು ಶ್ರೀಗಂಧದ ಮರಗಳನ್ನು ಕದ್ದ 7 ಕಳ್ಳರನ್ನು ಬಲೆಬೀಸಿ ಸೆರೆ ಹಿಡಿಯುವಲ್ಲಿ ಜೋಯಿಡಾ ಪೊಲೀಸ್ ಹಾಗೂ ಅರಣ್ಯ ಇಲಾಖೆ ತನಿಖಾ ತಂಡ ಯಶಸ್ವಿಯಾಗಿದೆ.
ಜೋಯಿಡಾ ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿರುವ ನಿವೃತ್ತ ಡಿಜಿಪಿ ಓಂಕಾರ ಎಂಬವರ ಖಾಸಗಿ ಪಾರಂ ಹೌಸ್‌ನ ಶ್ರೀಗಂಧದ ಒಟ್ಟೂ 6 ಮರಗಳನ್ನು ಎರಡು ಬಾರಿ ಕಟಾವು ಮಾಡಿ ಸಾಗಿಸಿದ್ದು ಹಾಗೂ ಅಲ್ಲಿಯೇ ಹತ್ತಿರದ ಜೋಯಿಡಾ ಅರಣ್ಯ ವಲಯ ವ್ಯಾಪ್ತಿಗೆ ಸೇರಿದ ನಾಗೋಡಾ ಅರಣ್ಯದ ಮೂರು ಶ್ರೀಗಂಧದ ಗಿಡಗಳನ್ನು ಕದ್ದ ಆರೋಪಕ್ಕೆ ಸಂದಬಂಧಿಸಿದಂತೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಸೂಚನೆ ಮೇರೆಗೆ ಈ ಶ್ರೀಗಂಧ ಕಳ್ಳರ ಸೇರೆಗೆ ಎರಡು ಪ್ರತ್ಯೇಕ ತಂಡ ರಚಿಸಿ, ಈ ತಂಡದ ಬಗ್ಗೆ ಮಾಹಿತಿ ಸಂಗ್ರಹಿಸಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ 7 ಜನರ ಕಳ್ಳರನ್ನು ದಸ್ತಗಿರಿ ಮಾಡಿ, ಇವರಿಂದ ಒಟ್ಟು 240ಕೆ.ಜಿ. ತೂಕದ ಶ್ರೀಗಂಧ ಹಾಗೂ ಆರೋಪಿತರು ಈ ಕೃತ್ಯಕ್ಕೆ ಬಳಸಿದ ಇನೋವಾ ಕಾರು ಮತ್ತು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಗಂಧದ ಮೌಲ್ಯ ಅಂದಾಜು 20 ಲಕ್ಷ ರೂ. ಎನ್ನಲಾಗಿದೆ. ಇದರ ಜೊತೆಯಲ್ಲಿ ಜೋಯಿಡಾ ತಾಲೂಕಿನ ಗುಂದ ಹಾಗೂ ಅಳ್ನಾವರದಲ್ಲಿ ನಡೆದ ಒಟ್ಟು 6 ಪ್ರಕರಣ ಭೇದಿಸುವಲ್ಲಿ ಈ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಈ ಏಳು ಆರೋಪಿತರನ್ನು ಕ್ರಮವಾಗಿ, ಅಶೋಕ ಬೇಡರ್ ಯನೆ ನಾಯಕ ಪಿರನವಾಡಿ ಜೋಯಿಡಾ, ಕರಿಯಪ್ಪ ಯಲ್ಲಪ್ಪ ಹಳಬ ಹಾಗೂ ಗಂಗಪ್ಪ ಯಮನಪ್ಪ ಹಳಬ ಖಾನಾಪುರ ಗರ್ಬೆನಹಳ್ಳಿ, ಸೋಮನಾಥ ವಾಲಿಕರ ಬಾಗೇವಾಡಿ ಖಾನಾಪುರ, ಪ್ರಮೋದ ನಿಲಜಕರ ಖಾನಾಪುರದ ನಂದಗಡ, ಬಾಲಚಂದ್ರ ಫಕಿರಪ್ಪ ತಳವರ ಖಾನಾಪುರ ಗರ್ಬೆನಹಟ್ಟಿ, ಯಲ್ಲಪ್ಪ ಯಮನಪ್ಪ ಹಳಬ, ಖಾನಾಪುರದ ಗರ್ಬೇನಹಟ್ಟಿ ಎಂದು ಗುರುತಿಸಿದ್ದು, ಇವರು ಗಂಧದ ಕಳ್ಳತನದಲ್ಲಿ ತಂಡ ರಚಿಸಿಕೊಂಡು ಜೋಯಿಡಾ ಸಮೀಪದ ಅಶೋಕ ಎಂಬಾತನಿಂದ ಮರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.