Advertisement

ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕದ್ದು,ಬಕೆಟ್‌ನಲ್ಲಿ ಬಚ್ಚಿಟ್ಟಿದ್ದ ಕಳ್ಳಿಯರ ಬಂಧನ

09:35 AM Mar 13, 2024 | Team Udayavani |

ಬೆಂಗಳೂರು: ಆಕಾಶವಾಣಿ ನಿವೃತ್ತ ಅಧಿಕಾರಿ ಮನೆಯಲ್ಲಿ ನರ್ಸಿಂಗ್‌ ಕೇರ್‌ನಲ್ಲಿ ಮೇಡ್‌ ಆಗಿ ಕೆಲಸಕ್ಕೆ ಸೇರಿ 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿದ್ದ ಇಬ್ಬರು ಮಹಿಳೆಯರು ಜೆ.ಪಿ.ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕೊಪ್ಪಳ ಮೂಲದ ಮಂಜುಳಾ(30) ಹಾಗೂ ಕನಕಪುರದ ಮಹದೇವಮ್ಮ (50) ಬಂಧಿತರು.

ಆರೋಪಿಗಳಿಂದ 28 ಲಕ್ಷ ರೂ. ಮೌಲ್ಯದ 414 ಗ್ರಾಂ ಚಿನ್ನಾಭರಣ, 104 ಗ್ರಾಂ ಬೆಳ್ಳಿ, 4 ವಿದೇಶಿ ಬ್ರ್ಯಾಂಡ್‌ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಕಾಶವಾಣಿ ನಿವೃತ್ತ ನಿರ್ದೇಶಕ ಮುನಿಕೃಷ್ಣಪ್ಪ (90) ಎಂಬುವರ ಮನೆಯಲ್ಲಿ ಆರೋಪಿಗಳು ನರ್ಸಿಂಗ್‌ ಕೇರ್‌ ಮತ್ತು ಮೇಡ್‌ ಆಗಿ ಕೆಲಸಕ್ಕೆಂದು ಸೇರಿಕೊಂಡಿದ್ದರು.

ಮುನಿಕೃಷ್ಣಪ್ಪ ಹಾಗೂ ಪತ್ನಿ ಅಣ್ಣಮ್ಮ ದಂಪತಿಗೆ ವಯಸ್ಸಾದ ಕಾರಣ ಅವರನ್ನು ನೋಡಿಕೊಳ್ಳಲೆಂದು ಮನೆಯಲ್ಲಿ ಆರೋಪಿ ಮಹಿಳೆಯನ್ನು ನೇಮಿಸಿಕೊಂಡಿದ್ದರು. “ಕೊರಳಲ್ಲಿ ಮಾಂಗಲ್ಯ ಸರ ಹಾಕಬೇಡಿ ಅಮ್ಮ, ತಿಜೋರಿಯಲ್ಲಿ ಇಟ್ಟುಬಿಡಿ. ವಾಕಿಂಗ್‌ ಹೋಗುವಾಗ ಇದನ್ನು ಧರಿಸುವುದು ಸೂಕ್ತವಲ್ಲ’ ಎಂದು ಅಣ್ಣಮ್ಮ ಅವರಿಗೆ ನರ್ಸ್‌ ಮಂಜುಳಾ ಆಗಾಗ ಹೇಳುತ್ತಿದ್ದಳು. ಇತ್ತ ಮನೆ ಕೆಲಸ ಮಾಡುತ್ತಿದ್ದ ಮಹದೇವಮ್ಮ ಪ್ರತಿದಿನ ವೃದ್ಧ ದಂಪತಿ ಮಲಗುವ ಮಂಚದ ಬಳಿ ಮಲಗುತ್ತಿದ್ದಳು. ವೃದ್ಧ ದಂಪತಿ ಬೀರುವಿನ ಕೀ ಇಡುತ್ತಿದ್ದ ಜಾಗ ಈಕೆಗೆ ಗೊತ್ತಿತ್ತು. ಮಹಾದೇವಿ ಹಾಗೂ ಮಂಜುಳಾ ಹೊಂಚು ಹಾಕಿ ಮನೆಯಲ್ಲಿ ಮಾಲೀಕರು ಇಲ್ಲದ ಸಮಯದಲ್ಲಿ ಅಲಮೇರಾದಲ್ಲಿದ್ದ ಚಿನ್ನಾಭರಣ, ಬೆಳ್ಳಿ, ವಿದೇಶಿ ಬ್ರ್ಯಾಂಡ್‌ ವಾಚ್‌ ಅನ್ನು ಕದ್ದಿದ್ದರು. ಇತ್ತೀಚೆಗೆ ಚಿನ್ನ ಕಳ್ಳತನವಾಗಿರುವುದು ಮುನಿಕೃಷ್ಣಪ್ಪನವರ ಗಮನಕ್ಕೆ ಬಂದಿತ್ತು. ತಾವೇ ಮರೆತು ಬೇರೆ ಎಲ್ಲಿಯಾದರೂ ಚಿನ್ನ ಇಟ್ಟಿರಬಹುದು ಎಂದು ಭಾವಿಸಿದ್ದರು. ಕದ್ದ ಚಿನ್ನಾಭರಣವನ್ನು ಕಳ್ಳಿಯರು ಮನೆಯ ಬಾತ್‌ರೂಂನ ಬಕೆಟ್‌ನಲ್ಲಿ ಬಚ್ಚಿಟ್ಟಿದ್ದರು.

ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?: ಕೆಲ ದಿನಗಳ ಹಿಂದೆ ಪತ್ನಿಗೆ ಕೊರಳಲ್ಲಿ ಒಡವೆ ಇಲ್ಲದನ್ನು ಗಮನಿಸಿದ ಮುನಿಕೃಷ್ಣಪ್ಪ, ಈ ಬಗ್ಗೆ ಪ್ರಶ್ನಿಸಿದ್ದರು. ಅಣ್ಣಮ್ಮ ಅವರು ಅಲ್ಮೇರಾದಲ್ಲಿ ತೆಗೆದು ನೋಡಿದಾಗ ಚಿನ್ನ ಇರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಸಿಗದಿದ್ದಾಗ ಮುನಿಕೃಷ್ಣಪ್ಪ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮನೆಗೆ ಬಂದ ಪೊಲೀಸರು ಮಹದೇವಮ್ಮಳನ್ನು ವಿಚಾರಣೆ ಮಾಡಿದ್ದರು. ಮೊದಲು ತನಗೆ ಏನು ಗೊತ್ತಿಲ್ಲ ಎಂದಿದ್ದ ಮಹಾದೇವಿ ಪೊಲೀಸರು ಕೇಳಿದ ಪ್ರಶ್ನೆಗೆ ಗೊಂದಲದ ಉತ್ತರ ಕೊಟ್ಟಿದ್ದಳು. ತೀವ್ರ ವಿಚಾರಣೆ ನಡೆಸಿದಾಗ ಮಂಜುಳಾ ಜೊತೆ ಸೇರಿಕೊಂಡು ಚಿನ್ನಾಭರಣವನ್ನೆಲ್ಲ ಕದ್ದು ಮನೆಯ ಬಾತ್‌ ರೂಮ್‌ನ ಬಕೆಟ್‌ವೊಂದರಲ್ಲಿ ಬಚ್ಚಿಟ್ಟಿದ್ದ ಸಂಗತಿ ಬಾಯ್ಬಿಟ್ಟಿದ್ದಳು. ಆರೋಪಿಗಳು ಹಿಂದೆ ಕೆಲಸ ಮಾಡು ತ್ತಿದ್ದ ಮನೆಗಳಲ್ಲಿ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next