Advertisement

Arrested: ಕುರಿ, ಮೇಕೆಗಳನ್ನೇ ಕದಿಯುತ್ತಿದ್ದ ಐನಾತಿ ಕಳ್ಳರ ಸೆರೆ

03:41 PM Feb 03, 2024 | Team Udayavani |

ದೇವನಹಳ್ಳಿ: ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ ಕುರಿ, ಮೇಕೆಗಳನ್ನು ಕದಿಯುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದ ಅಮರೇಶ್‌ ಬಿನ್‌ ಮಾರುತಿ ಅಲಿಯಾಸ್‌ ಮಾರಪ್ಪ (30), ಶಿವಶಂಕರ್‌ ಅಲಿಯಾಸ್‌ ಶಂಕರ್‌ ಬಿನ್‌ ರಮೇಶ್‌ (24), ಮಾನ್ವಿ ತಾಲೂಕಿನ ಮಾನ್ವಿ ಗ್ರಾಮದ ರಾಜಾ ಬಿನ್‌ ಗಡ್ಡಪ್ಪ (22) ಬಂಧಿತರು. ಆರೋಪಿಗಳಿಂದ 58 ಕುರಿ, 5 ಮೇಕೆಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳ್ಳತನ ಮಾಡಿದ್ದ ಆರೋಪಿಗಳ ಮೇಲೆ ರಾಜ್ಯದ ಹಲವು ಜಿಲ್ಲೆಗಳ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿವೆ.

ವಿವಿಧ ಪ್ರಕರಣ ದಾಖಲು: ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಪೊಲೀಸ್‌ ಠಾಣೆಗಳಾದ ಚಿಂತಾಮಣಿ ಗ್ರಾಮಾಂತರ, ಬಿಟ್ಟಗಾನಹಳ್ಳಿ ಮತ್ತು ಟಿ.ಹೊಸೂರು, ಕೆಂದನಹಳ್ಳಿ, ಪೆರಮಾಚನಹಳ್ಳಿ ಠಾಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಂತಾಮಣಿ ವ್ಯಾಪ್ತಿಯ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳಿಂದ ಕುರಿ, ಮೇಕೆಗಳನ್ನು ಪತ್ತೆ ಹಚ್ಚಲಾಗಿದೆ. ಕಳ್ಳತನ ಮಾಡಿದ್ದ ಆರೋಪಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು: ಚಿಂತಾಮಣಿ ತಾಲೂಕಿನಲ್ಲಿ ಇತ್ತೀಚೆಗೆ ಪದೇ ಪದೆ ಕುರಿ, ಮೇಕೆಗಳ ಕಳವು ಪ್ರಕರಣ ಅಧಿಕವಾಗಿ ದಾಖಲಾಗುತ್ತಿದ್ದವು. ಚಿಕ್ಕಬಳ್ಳಾಪುರ ಪೊಲೀಸ್‌ ಅಧೀಕ್ಷಕ ನಾಗೇಶ್‌ ಹಾಗೂ ಹೆಚ್ಚುವರಿ ಅಧೀಕ್ಷಕ ರಾಜಇಮಾಮ್‌ ಖಾಸಿಂ, ಚಿಂತಾಮಣಿ ಪೊಲೀಸ್‌ ಉಪಾಧೀಕ್ಷಕರಾದ ಮುರಳೀಧರ ಹಾಗೂ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು.

Advertisement

ಕೈವಾರ ಬಳಿ ಬಂಧನ: ಇತ್ತೀಚೆಗೆ ಚಿಂತಾಮಣಿ ಕೋಲಾರ ರಸ್ತೆಯ ಬೀಡಿಗಾನಹಳ್ಳಿ ಗ್ರಾಮದ ಕುರಿ ಶೆಡ್‌ನ‌ಲ್ಲಿ 35 ಕುರಿಗಳನ್ನು ಕಳ್ಳರು ಕದ್ದಿದ್ದರು. ಚಿಂತಾಮಣಿ ಗ್ರಾಮಾಂತರ ಪ್ರದೇಶ ವೃತ್ತ ನಿರೀಕ್ಷಕ ಸೂರ್ಯ ಪ್ರಕಾಶ್‌ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆಗಿಳಿದಿತ್ತು. ಕೈವಾರ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಹಂದಿಗಳ ಕಳ್ಳತನ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಠಾಣೆ ಬಿಟ್ಟಗಾನಹಳ್ಳಿಯಲ್ಲಿ 27 ಕುರಿಗಳು ಪತ್ತೆಯಾಗಿವೆ. ಇನ್ನು ಟಿ.ಹೊಸೂರು ಗ್ರಾಮದಲ್ಲಿ 6, ಪೆರಮಾಚನಹಳ್ಳಿ 4 ಮೇಕೆಗಳು ಪತ್ತೆಯಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬೆಳವಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 4 ಕುರಿ, ಒಂದು ಮೇಕೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 13 ಕುರಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ಠಾಣೆ ವ್ಯಾಪ್ತಿಯ ಅಮರಾವತಿ ಗ್ರಾಮದಲ್ಲಿ 9 ಕುರಿ, 2 ಮೇಕೆ, ಅಮೀನ್‌ಗಾಡ್‌ ಠಾಣೆ ವ್ಯಾಪ್ತಿಯಲ್ಲಿ 50 ಸಾವಿರ ನಗದು, ಕೀಪ್ಯಾಡ್‌ ಮೊಬೈಲ್, 5 ಗ್ರಾಂ ಬಂಗಾರದ ಸರ, ರೆಡ್ಮಿ ಮೊಬೈಲ್‌ ಫೋನ್‌, ಒಟ್ಟು ಬೆಲೆ 73 ಸಾವಿರ ರೂ., ಆಗಿದೆ.

ಹಾಗೆಯೇ ರಾಮನಗರ ಜಿಲ್ಲೆಯ ಮಾಗಡಿ ಠಾಣೆ ಹುಲಿಕಟ್ಟೆಯಲ್ಲಿ 50-51 ಹಂದಿ, 4 ಲಕ್ಷ ರೂ.ನಗದು ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ಚಿಕ್ಕಜಾಲ ಠಾಣೆ ವ್ಯಾಪ್ತಿಯ ಹುಣಸಮಾರನಹಳ್ಳಿ 70- 80 ಹಂದಿಗಳ ಬೆಲೆ 20 ಲಕ್ಷ ರೂ. ಮೌಲ್ಯದ್ದಾಗಿದೆ. ಈ ಸಂಬಂಧ ಗದಗ, ಹಾವೇರಿ, ರಾಯಚೂರು ಜಿಲ್ಲೆಗಳ ವಿವಿಧೆಡೆಯೂ ಹಲವು ಪ್ರಕರಣ ದಾಖಲಾಗಿವೆ. ಸಂಬಂಧಿಸಿದ ಪೊಲೀಸ್‌ ಠಾಣೆಯವರು ಮೇಲ್ಕಂಡ ಆರೋಪಿಗಳ ದಸ್ತಗಿರಿ ವಾರೆಂಟ್‌ ಗಳಿದ್ದಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next