Advertisement

ಅಂತಾರಾಜ್ಯ ಮೊಬೈಲ್‌ ಕಳ್ಳರ ಸೆರೆ

09:58 AM Oct 04, 2019 | Suhan S |

ಬೆಂಗಳೂರು: ಕದ್ದ ಮೊಬೈಲ್‌ಗ‌ಳನ್ನು ಪಾರ್ಸೆಲ್‌ಗ‌ಳ ಮೂಲಕ ನೆರೆ ರಾಜ್ಯಗಳಿಗೆ ಕಳುಹಿಸಿ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಬೃಹತ್‌ ಅಂತಾರಾಜ್ಯ ಮೊಬೈಲ್‌ ಕಳವು ಆರೋಪಿಗಳ ಜಾಲವನ್ನು ಕೇಂದ್ರ ವಿಭಾಗ ಪೊಲೀಸರು ಭೇದಿಸಿದ್ದಾರೆ.

Advertisement

ಈ ಸಂಬಂಧ ಜೆ.ಜೆ.ನಗರದ ಕಿಜರ್‌ ಪಾಷ (21), ಆರಿಫ್ ಖಾನ್‌ ಅಲಿಯಾಸ್‌ ಆರಿಫ್ (39), ಆಸಿಫ್ಖಾ ನ್‌ (36), ಚಿಕ್ಕಬಸ್ತಿ ನಿವಾಸಿ ನವಾಜ್‌ ಶರೀಫ್ (36), ಅಸ್ಲಂ (47), ಖಲೀಂ (20), ಸಲ್ಮಾನ್‌ (22), ಸೈಯದ್‌ ಅಕºರ್‌ (42), ಹೈದ್ರಾಬಾದ್‌ನ ಅಮೀರ್‌ ಜಮೀರ್‌ ಖಾನ್‌ (28) ಬಂಧಿಸಿದ್ದು, ಅವರಿಂದ 1.25 ಕೋಟಿ ರೂ. ಮೌಲ್ಯದ ವಿವಿಧ ಕಂಪನಿಗಳ 563 ಮೊಬೈಲ್‌ಗ‌ಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಆಟೋ, ಬೈಕ್‌ ಹಾಗೂ 26 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರೆ ನಾಲ್ಕೈದು ಮಂದಿ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

ಕೆಲ ವರ್ಷಗಳಿಂದ ನಗರದ ವಿವಿಧೆಡೆ ಒಂಟಿಯಾಗಿ ಓಡಾಡುವ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಮೊಬೈಲ್‌ ಕಳ್ಳತನ ಪ್ರಕರಣಗಳು ದಾಖಲಾಗುತ್ತಿತ್ತು. ಪ್ರಮುಖವಾಗಿ ಕೇಂದ್ರ ವಿಭಾಗಳಲ್ಲಿ ಹೆಚ್ಚಾಗಿ ನಡೆಯುತ್ತಿತ್ತು. ಈ ಸಂಬಂಧ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌, ಇನ್‌ಸ್ಪೆಕ್ಟರ್‌ ತನ್ವೀರ್‌, ಎನ್‌.ಜಗದೀಶ್‌, ಕೆ.ಎಂ.ರಫೀಕ್‌ ಮತ್ತು ಮುಖ್ಯಪೇದೆ ರಂಗನಾಥ್‌ರ ತಾಂತ್ರಿಕ ನೆರವು ಪಡೆದು 13 ಮಂದಿ ಪಿಎಸ್‌ಐ, 45 ಮಂದಿ ಸಿಬ್ಬಂದಿಯ ವಿಶೇಷ ತಂಡ ರಚನೆ ಮಾಡಿದ್ದರು. ಈ ತಂಡ ನಗರದಲ್ಲಿ ಕೆಲ ವರ್ಷಗಳಿಂದ ಮೊಬೈಲ್‌ ಕಳವು, ಸುಲಿಗೆ ಪ್ರಕರಣಗಳಲ್ಲಿ ನಿರಂತವಾಗಿದ್ದ ಆರೋಪಿಗಳ ಚಲನವಲನಗಳ ಮೇಲೆ ನಿಗಾವಹಿಸಿತ್ತು.

ಈ ವೇಳೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಗಾಂಜಾ, ಜೂಜಾಟ, ಸುಲಿಗೆ, ಕಳವು ಪ್ರಕರಣಗಳಲ್ಲಿ ತೊಡಗಿದ್ದ ಅಸ್ಲಾಂ ಮತ್ತು ಕಿಜರ್‌ ಪಾಷನನ್ನು ಒಂದೂವರೆ ತಿಂಗಳಿಂದ ಹಿಂಬಾಲಿಸಿದ ತಂಡ ಆತನ ಸಂಪೂರ್ಣ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಆತ ಇತರೆ ಆರೋಪಿಗಳ ಜತೆ ಸೇರಿಕೊಂಡು ಕಳವು ಮೊಬೈಲ್‌ಗ‌ಳನ್ನು ನೆರೆ ರಾಜ್ಯಕ್ಕೆ ಕಳುಹಿಸಿ ಮಾರಾಟ ಮಾಡುತ್ತಿರುವ ವಿಚಾರ ಖಚಿತ ಪಡಿಸಿಕೊಂಡ ತಂಡ 3-4 ದಿನಗಳ ಹಿಂದೆ ದಾಳಿ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಟ್ರಾವೆಲ್ಸ್‌ ಮೂಲಕ ರವಾನೆ: ಆರೋಪಿಗಳ ಪೈಕಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಕಿಜರ್‌ ಪಾಷ, ಸಲ್ಮಾನ್‌, ಆಟೋ ಚಾಲಕ ನವಾಜ್‌ ಷರೀಫ್, ಅಫ‌ಲ್‌ ಶರೀಫ್ ಹಾಗೂ ಖಲೀಂ ಅವರು ಮೊಬೈಲ್‌ಗ‌ಳನ್ನು ಕಳವು ಮಾಡುತ್ತಿದ್ದರು. ಬಳಿಕ ಆರೀಫ್ ಖಾನ್‌, ಆಸಿಫ್ಖಾ ನ್‌, ಅಸ್ಲಾಂ ಹಾಗೂ ಸೈಯದ್‌ ಅಕºರ್‌ಗೆ ಕಡಿಮೆಗೆ ಬೆಲೆಗೆ ಆ ಮೊಬೈಲ್‌ಗ‌ಳನ್ನು ಮಾರಾಟ ಮಾಡುತ್ತಿದ್ದರು.

Advertisement

ಈ ಆರೋಪಿಗಳು ತಮ್ಮ ಮನೆಗಳಲ್ಲಿಯೇ ಕಳವು ಮೊಬೈಲ್‌ಗ‌ಳ ಡೇಟಾಗಳನ್ನು “ಫ್ಲ್ಯಾಶ್‌’ ಮಾಡುತ್ತಿದ್ದು, ನಂತರ ಬಾಕ್ಸ್‌ವೊಂದರಲ್ಲಿ 15-20 ಮೊಬೈಲ್‌ಗ‌ಳನ್ನು ಪಾರ್ಸೆಲ್‌ ಮಾಡಿ ಖಾಸಗಿ ಟ್ರಾವೆಲ್ಸ್‌ ಹಾಗೂ ಕೋರಿಯರ್‌ ಮೂಲಕ ಹೈದ್ರಾಬಾದ್‌, ಕೇರಳ, ತಮಿಳುನಾಡು, ಮುಂಬೈಗೆ ಕಳುಹಿಸುತ್ತಿದ್ದರು.

ಆರೋಪಿ ಅಸ್ಲಂ ಪುತ್ರ ಅಫ್ರೋಜ್  ಈ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಇದೀಗ ಪರಾರಿಯಾಗಿದ್ದಾನೆ. ಹೈದರಾಬಾದ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಮಾರಾಟ ಮಳಿಗೆ ಹೊಂದಿರುವ ಆರೋಪಿ ಅಮೀರ್‌ ಜಮೀರ್‌ ಖಾನ್‌, ಆರೋಪಿಗಳಿಂದ ಮೊಬೈಲ್‌ ಖರೀದಿಸಿ ಸಾರ್ವಜನಿಕರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ. ಕೆಲವೊಮ್ಮೆ ಈ ಮೊಬೈಲ್‌ಗ‌ಳನ್ನೇ ಸಂಪೂರ್ಣವಾಗಿ ಹೊಸ ಮೊಬೈಲ್‌ ಮಾದರಿಯಲ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ. ಸದ್ಯ ಹೈದ್ರಾಬಾದ್‌ ಮೂಲದ ಆರೋಪಿ ಮಾತ್ರ ಬಂಧನವಾಗಿದ್ದು, ಇತರೆ ರಾಜ್ಯಗಳಲ್ಲಿ ಮೊಬೈಲ್‌ ಸ್ವೀಕರಿಸುತ್ತಿದ್ದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಮೊಬೈಲ್‌ ಕಳವು ದೂರಿನ ಮೇರೆಗೆ ಹೆಡ್‌ಕಾನ್‌ ಸ್ಟೆಬಲ್‌ ರಂಗನಾಥ್‌ ಅವರು ಕಳವು ಮೊಬೈಲ್‌ಗ‌ಳ ನೆಟ್‌ವರ್ಕ್‌ ಪರಿಶೀಲಿಸಿದಾಗ ಬಹುತೇಕ ಮೊಬೈಲ್‌ ಗಳು ಹೈದರಾಬಾದ್‌ನಲ್ಲಿ ಪತ್ತೆಯಾಗುತ್ತಿದ್ದವು. ಈ ಸುಳಿವಿನ ಆಧಾರದ ಮೇಲೆ ಕಾರ್ಯಚರಣೆ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

ವಾಟ್ಸ್‌ಆ್ಯಪ್‌ ಗ್ರೂಪ್‌: ಸ್ಥಳೀಯ ರಾಜಕೀಯ ಮುಖಂಡರ ಜತೆ ಆತ್ಮೀಯತೆ ಹೊಂದಿರುವ ಆರಿಫ್ಖಾ ನ್‌, ಇತರೆ ಆರೋಪಿಗಳಾದ ಕಿಜರ್‌ ಪಾಷ ಮತ್ತು ಅಸ್ಲಂ, ನಗರದಲ್ಲಿರುವ ಸುಲಿಗೆಕೋರರು, ಪರ್ಸ್‌ ಕಳ್ಳರು, ಮೊಬೈಲ್‌ ಕಳ್ಳರನ್ನು ನಿರ್ವಹಣೆ ಮಾಡುತ್ತಿದ್ದರು. ಕಳವು ಮೊಬೈಲ್‌ಗೆ ಇಂತಿಷ್ಟು ಕಮಿಷನ್‌ ಕೊಡುತ್ತಿದ್ದರು. ಅಲ್ಲದೆ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡು ಯಾವ ಮಾದರಿಯ ಮೊಬೈಲ್‌ಗ‌ಳಿಗೆ ಬೇಡಿಕೆ ಇದೆ, ಕಳವು ಮಾಡಿದ ಬಳಿಕ ಯಾವ ಸ್ಥಳಕ್ಕೆ ಮೊಬೈಲ್‌ ತರಬೇಕು ಎಂದು ಸ್ಥಳ ನಿಗದಿ ಮಾಡುತ್ತಿದ್ದರು. ಬಳಿಕ ಆಟೋದಲ್ಲಿ ತೆರಳಿ ಆ ಯುವಕರಿಂದ ಮೊಬೈಲ್‌ ಖರೀದಿ ಮಾಡುತ್ತಿದ್ದರು. ಆದರೆ, ಮೊಬೈಲ್‌ ಕಳವು ಮಾಡುತ್ತಿದ್ದ ಯುವಕರಿಗೆ ಪೊಲೀಸರಿಗೆ ಸಿಕ್ಕಿಬಿದ್ದರೆ ಯಾವುದೇ ಕಾರಣಕ್ಕೂ ತಮ್ಮ ಹೆಸರು ಹೇಳದಂತೆ ತಾಕೀತು ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next