ಬೆಂಗಳೂರು: ಅಲೆಮಾರಿಗಳ ಸೋಗಿನಲ್ಲಿ ಕಾಡಿ ನಲ್ಲಿ ಗಾಂಜಾ ಬೆಳೆದು, ಹ್ಯಾಶಿಸ್ ಆಯಿಲ್ ಉತ್ಪಾದನೆ ಮಾಡಿ ನಗರದಲ್ಲಿ ಡಿಜೆಯೊಬ್ಬನಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಪೆಡ್ಲರ್‌ಗಳು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶ ವಿಶಾಖಪಟ್ಟಣದ ಶ್ರೀನಿವಾಸ್ (44), ಮಲ್ಲೇಶ್ವರಿ (35), ಸತ್ಯವತಿ (34) ಮತ್ತು ಪ್ರಹ್ಲಾದ್ (33) ಬಂಧಿತರು. ಆರೋಪಿಗಳಿಂದ 4 ಕೋಟಿ ರೂ. ಮೌಲ್ಯದ 5 ಕೆ.ಜಿ ಹ್ಯಾಶಿಸ್ ಆಯಿಲ್, 6 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತಾ ಹೇಳಿದರು.
ಜೂನ್23 ರಂದು ವಿವೇಕ ನಗರದಲ್ಲಿ ಡ್ರಗ್ಸ್ ಮಾರಾಟದ ಮಾಹಿತಿ ಮೇರೆಗೆ ಕಾರ್ಯಾಚರಣೆ ನೀಲಸಂದ್ರದ ಡಿಜೆ(ಡಿಸ್ಕೊ ಜಾಕಿ) ಜೂಡ್ ಹ್ಯಾರಿಸ್ (38)ನನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ, ಎಕ್ಸ್ಟೈಸಿ ಮಾತ್ರೆಗಳು, ಎಲ್‌ಎಸ್‌ಡಿ ಸ್ಟ್ರಿಪ್ಸ್‌ಗಳು ವಶಪಡಿಸಿಕೊಳ್ಳಲಾಗಿತ್ತು. ಈತನ ವಿಚಾರಣೆ ವೇಳೆ ಆರೋಪಿಗಳ ಹೆಸರು ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಆಂಧ್ರದಲ್ಲಿ ಬಂಧಿಸಲಾಗಿದೆ ಎಂದರು.
ಕಾಡಿನಲ್ಲೇ ಮಾದಕ ವಸ್ತು ತಯಾರಿ!: ನಾಲ್ವರು ಪೆಡ್ಲರ್‌ಗಳು ವಿಶಾಖಪಟ್ಟಣಂ ಜಿಲ್ಲೆಯ ಸೆಂಥಿಪಲ್ಲಿ ಹಾಗೂ ಅರಕು ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಬೆಳೆದು ಅದರಿಂದ ಹ್ಯಾಶಿಸ್ ಆಯಿಲ್ ನ್ನು ತಯಾರಿಸಿ ಮಾರುತ್ತಿದ್ದರು. ಅರಕು ಹಾಗೂ ಸೆಂಥಿಪಲ್ಲಿ ಅರಣ್ಯಪ್ರದೇಶದ ಬುಡಕಟ್ಟು ಕುಗ್ರಾಮಗಳಲ್ಲಿ ವಾಸವಾಗಿದ್ದು, ಬೆಂಗಳೂರು, ಕೊಚ್ಚಿನ್, ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಇತರೆ ಮಹಾ ನಗರಗಳ ಡ್ರಗ್ಸ್ ಪೆಡ್ಲರ್ ಗಳ ಜತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.
ನೆಲ್ಲೂರು, ಗುಂಟೂರು, ವಿಜಯವಾಡ, ಪುಟ್ಟಪರ್ತಿ, ಹೈದರಾಬಾದ್ ರೈಲು ನಿಲ್ದಾಣ ಹಾಗೂ ಹೈದರಾಬಾದ್ ಬಸ್ ನಿಲ್ದಾಣಗಳಿಗೆ ಪೆಡ್ಲರ್‌ಗಳನ್ನು ಕರೆಸಿಕೊಂಡು, ನಗದು ರೂಪದಲ್ಲಿ ಹಣ ಪಡೆದು ಹ್ಯಾಶಿಸ್ ಆಯಿಲ್ ಮತ್ತು ಗಾಂಜಾ ಆರ್ಡರ್ ಪಡೆದು ಅಲೆ ಮಾರಿಗಳ ಸೋಗಿನಲ್ಲಿ ಮಾಲು ರವಾನೆ ಮಾಡಿ ಮಾರುತ್ತಿದ್ದರು. ಸಿಸಿಬಿ ಡಿಸಿಪಿ ಬಿ.ಎಸ್. ಅಂಗಡಿ ನೇತೃತ್ವದಲ್ಲಿ ಎಸಿಪಿ ರಾಮಚಂದ್ರ, ಇನ್‌ಸ್ಪೆಕ್ಟರ್ ಬಿ.ಎಸ್. ಅಶೋಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.