ಬೆಂಗಳೂರು: ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ, ರೈತರ ಸಾಲ ಮನ್ನಾ ಮತ್ತು ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಮೈತ್ರಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಹೊರಟಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಅರ್ಧದಲ್ಲೇ ತಡೆದು ಬಂಧಿಸಿದರು.
ಶುಕ್ರವಾರ ಬೆಳಗ್ಗೆ ಶುರುವಾದ 48 ಗಂಟೆ ಗಳ ಕಾಲದ ಅಹೋರಾತ್ರಿ ಧರಣಿ ಬಳಿಕ ರವಿವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಗೃಹ ಕಚೇರಿ ‘ಕೃಷ್ಣಾ’ಗೆ ಮುತ್ತಿಗೆ ಹಾಕಲು ಮುಂದಾದರು.
ಪೊಲೀಸರು ತಡೆದ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ‘ಕೃಷ್ಣಾ’ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು.
ಬಿಜೆಪಿ ನಾಯಕರು, ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಲು ಮುಂದಾಗುತ್ತಿದ್ದಂತೆ ಪೊಲೀಸರು ಯಡಿಯೂರಪ್ಪ, ಆರ್.ಅಶೋಕ್, ಅರವಿಂದ ಲಿಂಬಾವಳಿ, ರೇಣುಕಾಚಾರ್ಯ ಸಹಿತ ಎಲ್ಲ ನಾಯಕರನ್ನು ಬಂಧಿಸಿ, ಪೊಲೀಸ್ ವಾಹನದಲ್ಲಿ ಕರೆದೊಯ್ದರು.
ಜಿಂದಾಲ್ ಕಂಪೆನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಹಿಂದಿನ ಒಪ್ಪಂದದಂತೆ ಗುತ್ತಿಗೆ ಮುಂದುವರಿಸಿದರೆ ಆಕ್ಷೇಪವಿಲ್ಲ. ಆದರೆ ಕಂಪೆನಿಗೆ ಭೂಮಿ ಮಾರಾಟ ಮಾಡುವುದಕ್ಕೆ ನಮ್ಮ ವಿರೋಧವಿದೆ.
– ಬಿ.ಎಸ್. ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ
ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಗೆ ಆಹ್ವಾನಿಸಿ ಸಚಿವ ವೆಂಕಟರಾವ್ ನಾಡಗೌಡ ಮೂಲಕ ವಿಪಕ್ಷ ನಾಯಕರಿಗೆ ಪತ್ರ ಕಳುಹಿಸಿದ್ದೆ. ಅವರು ಚರ್ಚೆಗೆ ಸಮಯ ಕೋರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ. ಅವರಿಗೆ ಬೇಕಿರುವುದು ಅಗ್ಗದ ಪ್ರಚಾರ, ಅಭಿವೃದ್ಧಿ ಆಧಾರಿತ ಚರ್ಚೆಯಲ್ಲ.
–
ಎಚ್.ಡಿ. ಕುಮಾರಸ್ವಾಮಿ, ಸಿಎಂ