Advertisement

ಬನವಾಸಿ ನಿವಾಸಿ ಆರೋಪಿಯ ಬಂಧನ; ಸೊತ್ತು ವಶ

02:30 AM Nov 06, 2019 | mahesh |

ಕಾಪು: ಪಾದೂರು ಗ್ರಾಮದ ಹೊಸಬೆಟ್ಟು ಬಸದಿಯ ಬಳಿ ಮನೆಯ ತೋಟದಲ್ಲಿ ತರಕಾರಿ ಕೊಯ್ಯುತ್ತಿದ್ದ ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಉಂಚಳ್ಳಿ ಗ್ರಾಮದ ಬನವಾಸಿ ನಿವಾಸಿ ಅರವಿಂದ ನಾರಾಯಣ ನಾಯ್ಕ (34) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಮಾಂಗಲ್ಯ ಸರ ಸಹಿತ 1,46,200 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾದೂರು ಜೈನ ಬಸದಿ ನಿವಾಸಿ ಗೀತಾ ಸುಜನ್‌ ಕುಮಾರ್‌ ಅವರು ಮನೆಯ ತೋಟದಲ್ಲಿ ಅ. 11ರಂದು ತರಕಾರಿ ಕೊಯ್ಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಬಂದು ಕುತ್ತಿಗೆಗೆ ಬಟ್ಟೆ ಬಿಗಿದು ಕುತ್ತಿಗೆಯಲ್ಲಿದ್ದ ಮೂರು ಪವನ್‌ ತೂಕದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದನು.

ಇದನ್ನು ಗೀತಾ ಅವರು ವಿರೋಧಿಸಿದ್ದ ವೇಳೆ ಅವರ ಕುತ್ತಿಗೆ, ಕೈಗೆ ಮತ್ತು ಮೂಗಿನ ಕೆಳಗಡೆ ಗಾಯವಾಗಿತ್ತು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಸರಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಅವರು ತನಿಖೆ ಮುಂದುವರಿಸಿದ್ದರು.

ಎರಡು ಪ್ರಕರಣಗಳು ಬೆಳಕಿಗೆ : ಆರೋಪಿ ಅರವಿಂದ ನಾರಾಯಣ ನಾಯ್ಕನಿಂದ ಗೀತಾ ಅವರ ಕುತ್ತಿಗೆಯಿಂದ ಎಳೆದು ಪರಾರಿಯಾಗಿದ್ದ ಮಾಂಗಲ್ಯ ಸರ ಮತ್ತು ಪಾದೂರು ಜೈನ ಬಸದಿಯ ಬಳಿಯ ನಿವಾಸಿ ದೇವದಾಸ್‌ ಹೆಬ್ಟಾರ್‌ ಎಂಬವರ ಮನೆಯೊಂದರಿಂದ ಕಳವು ಮಾಡಲಾಗಿದ್ದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Advertisement

ವಶ‌ಪಡಿಸಿಕೊಂಡ ಸೊತ್ತುಗಳ ವಿವರ : ಡಿಸೈನ್‌ನ ಚಿನ್ನದ ಕರಿಮಣಿ ಸರ-1, ಚಿನ್ನದ ಬ್ರಾಸ್‌ಲೆಟ್‌-1, ಚಿನ್ನದ ಉಂಗುರ-1, ಚಿನ್ನದ ಬೆಂಡೋಲೆ -1, ವಿವೋ ಕಂಪೆನಿಯ ಮೊಬೈಲ್‌ಫೋನ್‌-1 ಸಹಿತ ಸೊತ್ತುಗಳ ಒಟ್ಟು ಮೌಲ್ಯ ರೂ.1,46,200 ಎಂದು ಅಂದಾಜಿಸಲಾಗಿದೆ.

ಹಲವು ಪ್ರಕರಣಗಳಲ್ಲಿ ಭಾಗಿ : ಆರೋಪಿಯು ಈ ಹಿಂದೆ ಐಎಸ್‌ಪಿಆರ್‌ಎಲ… ಮತ್ತು ಯುಪಿಸಿಎಲ್‌ನ ಗುತ್ತಿಗೆದಾರರ ವಾಹನಗಳಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಈ ಸಂದರ್ಭ ಸ್ಥಳೀಯ ಪರಿಸರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದನು. ಈತನ ವಿರುದ್ಧ ಮಲ್ಪೆ, ಶಿರಸಿ, ಕುಮಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಮತ್ತು ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಕರೆ ಮಾಡಿದ ಬಗ್ಗೆ ಹಿರಿಯಡ್ಕ ಪೊಲೀಹ್‌ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.

ನಾಟಕವಾಡಿ ಕದ್ದ ಆಭರಣಗಳನ್ನು ಮಾರಾಟ ಮಾಡಿದ್ದ : ಕ್ಯಾನ್ಸರ್‌ ಪೀಡಿತ ಮೊದಲ ಹೆಂಡತಿಯನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದ ಆರೋಪಿ ಅವಳ ಶುಶ್ರೂಷೆಗಾಗಿ ಹಣದ ಅಗತ್ಯವಿದೆ ಎಂಬ ಕಾರಣಕ್ಕಾಗಿ ಕಳ್ಳತನವನ್ನು ವೃತ್ತಿಯನ್ನಾಗಿಸಿಕೊಂಡಿದ್ದನು ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.

ಎರಡನೇ ಪತ್ನಿಯ ಬಳಿ ಹೆಂಡತಿಯ ಕರಿಮಣಿ ಸರ ಮತ್ತು ಬ್ರಾಸ್‌ಲೈಟ್‌ನ್ನು ಅಡವಿಟ್ಟು ಹಣ ತಂದು ಕೊಡುವಂತೆ ಒತ್ತಾಯಿಸಿದ್ದು, ಅದನ್ನು ನಂಬಿಸಿದ ಆಕೆ ಪಾದೂರಿನಲ್ಲಿ ಕದ್ದ ಕರಿಮಣಿ ಸರ, ಬ್ರಾಸ್‌ಲೈಟ್‌ ಸಹಿತ ಆಭರಣಗಳನ್ನು ಮಂಗಳೂರಿನ ಜ್ಯುವೆಲ್ಲರಿ ಅಂಗಡಿಯಲ್ಲಿ ಅಡವಿಟ್ಟು ಹಣ ತಂದುಕೊಟ್ಟಿದ್ದಳು.

ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಅವರ ನಿರ್ದೇಶದಂತೆ, ಕಾರ್ಕಳ ಎಎಸ್ಪಿ ಕೆ. ಕೃಷ್ಣಕಾಂತ್‌ ಅವರ ಮಾರ್ಗದರ್ಶನದಲ್ಲಿ ಸಿಐ ಮಹೇಶ್‌ಪ್ರಸಾದ್‌ ಅವರ ನೇತೃತ್ವದಲ್ಲಿ ಶಿರ್ವ ಠಾಣಾ ಎಸ್‌ ಐ ಅಬ್ದುಲ್‌ ಖಾದರ್‌, ಪ್ರೊಬೆಷನರಿ ಎಸ್ಸೆ ಸದಾಶಿವ ಗವರೋಜಿ ಹಾಗೂ ಡಿಸಿಐಬಿ ತಂಡದ ಸುರೇಶ್‌, ಶಿವಾನಂದ, ಹಾಗೂ ಸಿಬಂದಿ ಪ್ರವೀಣ್‌ ಕುಮಾರ್‌, ರಾಜೇಶ್‌, ಸುಕುಮಾರ್‌, ರವಿ ಕುಮಾರ್‌, ದಾಮೋದರ, ರಾಘವೇಂದ್ರ ಜೋಗಿ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next