ಬೆಂಗಳೂರು: ಗಾಂಜಾ ಅಮಲಿನಲ್ಲಿ ಮೊಬೈಲ್‌ಗಾಗಿ ಆಂಧ್ರಪ್ರದೇಶ ಮೂಲದ ಯುವಕನನ್ನು ಕೊಂದಿದ್ದ ಇಬ್ಬರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ (20) ಮತ್ತು ಮೊಹಮದ್ ಸಿದ್ದಿಕ್ (19) ಬಂಧಿತರು. ಆರೋಪಿಗಳು ಜು.8ರಂದು ರಾತ್ರಿ 9 ಗಂಟೆ ಸುಮಾರಿಗೆ ಆಂಧ್ರಪ್ರದೇಶ ಮೂಲದ ಜ್ಞಾನೇಂದ್ರ ರೆಡ್ಡಿ (28) ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.
ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಜ್ಞಾನೇಂದ್ರ ರೆಡ್ಡಿ, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಜು.8ರಂದು ರಾತ್ರಿ 9 ಗಂಟೆಗೆ ನಾಗವಾರ ಸೇತುವೆ ಕೆಳ ಭಾಗದಲ್ಲಿ ನಿಂತು ತಮ್ಮ ಸ್ನೇಹಿತೆ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಸೇತುವೆ ಮುಂಭಾಗದ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದ ಗೆಳತಿಗೆ ಹೊರಗಡೆ ಬರುವಂತೆ ಹೇಳಿದ್ದರು.
ಗೆಳತಿ ಕಣ್ಣೆದುರೇ ಕೊಲೆ: ಗೆಳತಿ, ಪಿಜಿಯ ಕಿಟಕಿಯಿಂದಲೇ ಜ್ಞಾನೇಂದ್ರನನ್ನು ನೋಡುತ್ತಾ ಮಾತನಾಡುತ್ತಿದ್ದರು. ಈ ವೇಳೆ ಗಾಂಜಾ ಅಮಲಿನಲ್ಲಿ ಅಲ್ಲಿಗೆ ಬಂದ ಆರೋಪಿಗಳು, ಜ್ಞಾನೇಂದ್ರನ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಆತ ಪ್ರತಿರೋಧ ತೋರಿದಾಗ ಆರೋಪಿಗಳು ಆತನ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.
ಕೃತ್ಯವನ್ನು ನೋಡಿದ ಸ್ನೇಹಿತೆ ಕೂಡಲೇ ತನ್ನ ಮತ್ತೂಬ್ಬ ಸ್ನೇಹಿತೆ ಜತೆ ಕೆಳಗೆ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಜ್ಞಾನೇಂದ್ರನನ್ನು ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ನೀಡಿದ ವೈದ್ಯರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಂಪಿಗೆಹಳ್ಳಿ ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಸದ್ದಾಂ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ಕಳವು, ದರೋಡೆ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ, ತನ್ನ ಸಹಚರರನ ಜತೆ ಸೇರಿ ಗಾಂಜಾ ಸೇವಿಸಿ, ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.