Advertisement

11 ಮಂದಿ ದರೋಡೆಕೋರರ ಬಂಧನ

12:13 PM Dec 20, 2018 | Team Udayavani |

ಬೆಂಗಳೂರು: ಕೊಲೆ, ಸುಲಿಗೆ, ಸರಗಳ್ಳತನ, ಮನೆ ಕಳವು, ದ್ವಿಚಕ್ರ ವಾಹನ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿರುವ ಪೂರ್ವ ವಿಭಾಗದ ಪೊಲೀಸರು, 86.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಮೈಸೂರಿನ ಕಲ್ಯಾಣನಗರ ನಿವಾಸಿ ಸುಹೇಲ್‌ ಪಾಷಾ ಅಲಿಯಾಸ್‌ ಸುಹೇಲ್‌ ಅಲಿಯಾಸ್‌ ಖಾಣ ಅಲಿಯಾಸ್‌ ಖನ್ನು (24) ಬಂಧಿತ. ಈತನ ಬಂಧನದಿಂದ 15 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 15 ಲಕ್ಷ ರೂ.ಮೌಲ್ಯದ 500 ಗ್ರಾಂ ತೂಕದ 15 ಚಿನ್ನದ ಸರಗಳು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮನೆ ನಿರ್ವಹಣೆ ಹಾಗೂ ಐಷಾರಾಮಿ ಜೀವನಕ್ಕಾಗಿ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ.

ಇತ್ತೀಚೆಗೆ  ಹೆಣ್ಣೂರು ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಬೀಟ್‌ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು. ಕೆಲ ವರ್ಷಗಳ ಹಿಂದೆ ಕಲ್ಕೆರೆಯಲ್ಲಿ ವಾಸವಾಗಿದ್ದ ಆರೋಪಿ, ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ತಾನು ಸಂಪಾದಿಸುತ್ತಿದ್ದ ಹಣದಲ್ಲಿ ಜೀವನ ನಿರ್ವಹಣೆ ಸಾಧ್ಯವಾಗದೆ, ಮೊಬೈಲ್‌ ಕಳ್ಳತನ ಆರಂಭಿಸಿದ್ದ. ಬಳಿಕ ಸರಗಳ್ಳತನ ಕೃತ್ಯಕ್ಕೆ ಇಳಿದಿದ್ದಾನೆ. 
ಹೊಸ ಕಾರು ಖರೀದಿ

ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬ ಕೃತ್ಯವೆಸಗಿದ ಹಣದಲ್ಲಿ ಹೊಸ ಕಾರೊಂದನ್ನು ಖರೀದಿಸಿ ಬಾಡಿಗೆಗೆ ಬಿಟ್ಟು ಜೀವನ ನಡೆಸುತ್ತಿದ್ದ ಎಂಬ ವಿಚಾರ ಹೆಣ್ಣೂರು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದರೆ, ಆರೋಪಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳಿಸಲಾಗಿದೆ.

ಅಲ್ಲದೆ, ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈತ, ತಿಂಗಳಿಗೊಂದು ಮೊಬೈಲ್‌ ಮತ್ತು ಸಿಮ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದ. ತನ್ನ ಹೆಸರನ್ನು ಸುಹೇಲ್‌, ಸುಹೇಲ್‌ ಪಾಷಾ, ಖಾಣ, ಖನ್ನು ಎಂದೆಲ್ಲ ಬದಲಿಸಿಕೊಂಡು ಪದೇ ಪದೆ ಬಾಡಿಗೆ ಮನೆಗಳನ್ನು ಬದಲಿಸುತ್ತಿದ್ದ. ಕೆಲ ತಿಂಗಳಿಂದ ಆರೋಪಿ ಮೈಸೂರಿನ ಕಲ್ಯಾಣಗಿರಿಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದು, ಕಳವು ಮಾಡಿದ್ದ ಚಿನ್ನಾಭರಣಗಳನ್ನು ಗಿರವಿ ಅಂಗಡಿಗಳಲ್ಲಿ ಅಡಮಾನ ಇಟ್ಟು ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

ಅತ್ತೆ ಮನೆಗೆ ಬಂದು ಕೃತ್ಯ: ಒಂಟಿಯಾಗಿ ಓಡಾಡುವ ಮಹಿಳೆಯರು, ಯುವತಿಯರು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದ ಸುಹೇಲ್‌ ಪಾಷಾ, ಟ್ಯಾನರಿ ರಸ್ತೆಯಲ್ಲಿರುವ ತನ್ನ ಅತ್ತೆ ಮನೆಗೆ ಬಂದು ನಗರದಲ್ಲಿ ಸರಗಳ್ಳತನ ಮಾಡಿಕೊಂಡು ರಾತ್ರೋರಾತ್ರಿಯೇ ಮೈಸೂರಿಗೆ ಪರಾರಿಯಾಗುತ್ತಿದ್ದ.

ಚೀಟಿಯೊಂದರಲ್ಲಿ ನಕಲಿ ವಿಳಾಸ ಬರೆದುಕೊಂಡು ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ವಿಳಾಸ ಕೇಳವ ನೆಪದಲ್ಲಿ ಮಾತನಾಡಿಸಿ, ಅವರ ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದರು. ಕಳ್ಳರಿಂದ ಕದ್ದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಪೂರ್ವ ವಲಯ ಡಿಸಿಪಿ ಎಸ್‌.ರಾಹುಲ್‌ ಕುಮಾರ್‌ ಇದ್ದರು.

ಐವರ ಬಂಧನ, 47.64 ಲಕ್ಷ ರೂ. ವಶಕ್ಕೆ: ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು, 47.64 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ಹಾಗೂ 3 ದ್ವಿಚಕ್ರ ವಾಹನಗಳು, ಒಂದು ಮೊಬೈಲ್‌ ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರ ಪ್ರದೇಶದ ಪಣೀಷ್‌, ನಗರದ ಷಣ್ಮುಗಂ, ಜ್ಞಾನಪ್ರಕಾಶ್‌, ರೂಬನ್‌ ಮತ್ತು ಮುಕ್ತಿಯಾರ್‌ ಬಂಧಿತರು.

ಮನೆಗಳ್ಳತನ ಹಾಗೂ ವಾಹನ ಕಳ್ಳರ ಸೆರೆ: ಮನೆಗಳ್ಳತನ ಮತ್ತು ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಬ್ಬ ಕಾನೂನು ಸಂಘರ್ಷಕ್ಕೊಳಗಾದವ ಸೇರಿ ಐವರನ್ನು ಜೆ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ್‌ ಅಲಿಯಾಸ್‌ ಪುಟ್ಟ(19), ಕಿರಣ್‌ (18), ಬಲಾಜಿ (18), ಮಣಿ ಮಾರನ್‌(29) ಬಂಧಿತರು. ಆರೋಪಿಗಳ ಬಂಧನದಿಂದ 13 ಮನೆಗಳ್ಳತನ, 2 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 19, 83 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಕೊಲೆ ಆರೋಪಿಗಳ ಬಂಧನ: ಇತ್ತೀಚೆಗಷ್ಟೇ ಕ್ಯಾಬ್‌ ಚಾಲಕ ಮೋಹನ್‌ ಕುಮಾರ್‌ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರಳಿ ಮತ್ತು ಪೀಟರ್‌ ವಿಚಾರಣೆ ವೇಳೆ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿಯೂ ಹಲ್ಲೆ, ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ಕಂಡು ಬಂದಿದೆ. ಬಾನ್ಸರ್‌ ಮುರಳಿ ಮತ್ತು ಫ‌ುಟ್‌ಬಾಲ್‌ ತರಬೇತಿದಾರ ಪೀಟರ್‌ ಐಷಾರಾಮಿ ಜೀವನಕ್ಕಾಗಿ ಈ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದರು.

ಕಾನ್‌ಸ್ಟೆಬಲ್‌ಗೆ ಗೌರವ: ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಅಪರಾಧ ಕೃತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬೈಯಪ್ಪನಹಳ್ಳಿ ಠಾಣೆಯ ಕಾನ್‌ಸ್ಟೆàಬಲ್‌ ಸುಬ್ರಹ್ಮಣ್ಯ ಶಾನುಬೋಗನಹಳ್ಳಿ ಅವರು ರಚಿಸಿದ ಜಾಗೃತಿ ಗೀತೆಗಳನ್ನು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಹಾಗೂ ಡಿಸಿಪಿ ಎಸ್‌. ರಾಹುಲ್‌ ಕುಮಾರ್‌  ಬುಧವಾರ ಬಿಡುಗಡೆಗೊಳಿಸಿದರು.

ಮನೆಗಳ್ಳತನ, ದರೋಡೆ, ಸರಗಳ್ಳತನ, ಸುಲಿಗೆ ಸೇರಿ ಹಲವು ಅಪರಾಧ ಕೃತ್ಯಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಡಿಯೋ ಚಿತ್ರೀಕರಣ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಬೈಯ್ಯಪ್ಪನ ಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ ಸುಬ್ರಹ್ಮಣ್ಯ ಶಾನಬೋಗನಹಳ್ಳಿ ಮತ್ತು ಸಂಗೀತ ನಿರ್ದೇಶಕ ಹೇಮಂತ್‌ಕುಮಾರ್‌ ಅವರಿಗೆ ಪುಷ್ಪಗುತ್ಛ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next