ಹುಬ್ಬಳ್ಳಿ: ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರನ್ನು ತಕ್ಷಣ ಬಂಧಿಸಬೇಕು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ರೀತಿ ಮಾತನಾಡುತ್ತಿರುವುದು ಅವರ ಪಕ್ಷದ ಹಾಗೂ ವೈಯಕ್ತಿಕ ಬದ್ಧತೆ ಏನೆಂಬುದು ಗೊತ್ತಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಆಕ್ರೋಶ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ನಂತೆ ಹೊಡೆದು ಹಾಕಬೇಕು ಎಂಬ ಅಶ್ವತ್ಥ ನಾರಾಯಣ ಅವರ ಹೇಳಿಕೆ ಕುರಿತು ಗುರುವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಶಾಂತಿ, ನೆಮ್ಮದಿ ಹಾಗೂ ಸಹ ಬಾಳ್ವೆಯ ವಿಚಾರ ಬಿಟ್ಟು ಬರಿ ಹೊಡಿ-ಬಡಿ ಎನ್ನುವ ಸಂಸ್ಕೃತಿ ಬಿಜೆಪಿ ಅವರದ್ದಾಗಿದೆ. ಬಿಜೆಪಿ ಸರ್ಕಾರದ ಆಯುಷ್ಯ ಇನ್ನೂ 60 ದಿನ ಮಾತ್ರ. ಆದ್ದರಿಂದ ಈ ರೀತಿ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದರು.
ಸಚಿವ ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ. ಶೇ. 40ರಷ್ಟು ಕಮಿಷನ್ ಜೊತೆ ಚುನಾವಣೆ ಮಾಡಲು ಟೆಂಡರ್ ನಲ್ಲಿ ಹಣ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:“ನಿನ್ನ ಕೆನ್ನೆಗೆ ಬಾರಿಸುತ್ತೇನೆ”-ಮಹಿಳಾ ಪೋಲಿಸ್ ಅಧಿಕಾರಿಗೆ ಬಿಜೆಪಿ ಮುಖಂಡನ ಧಮ್ಕಿ
ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರದಲ್ಲಿ ಮುಳಗಿದೆ. ಸರ್ಕಾರ ಅಭಿವೃದ್ಧಿ, ಯುವಕರಿಗೆ ಉದ್ಯೋಗ, ಬಡವರಿಗೆ ಮನೆ ಕೊಡುವುದರ ಬಗ್ಗೆ ಮಾತನಾಡದ ಅವರು, ದ್ವೇಷ ಭಾವನೆ ಸೃಷ್ಟಿಸುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಜನರನ್ನು ತಪ್ಪುದಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರು ಪ್ರಬುದ್ಧರಾಗಿದ್ದಾರೆ. ನಾಲ್ಕು ವರ್ಷದ ಆಳ್ವಿಕೆಯಲ್ಲಿ ಸರ್ಕಾರ ಬರೀ ಭ್ರಷ್ಟಾಚಾರ ಮಾಡಿದೆ. ಇದು ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟಾಚಾರದ ಪಾರ್ಟಿಯಾಗಿದೆ ಎಂದು ಹರಿಹಾಯ್ದರು.