Advertisement

Mangalore: ಶ್ರೀಲಂಕಾ ಪ್ರಜೆಗಳ ಬಂಧನ ಪ್ರಕರಣ- ಮಂಗಳೂರಿಗೆಂದು 2 ಲಕ್ಷ ರೂ. ನೀಡಿದ್ದ ಈಸನ್‌

11:30 PM Dec 21, 2023 | Team Udayavani |

ಬೆಂಗಳೂರು: ಎರಡೂವರೆ ವರ್ಷಗಳ ಹಿಂದೆ ತಮಿಳುನಾಡಿನಿಂದ ಮಂಗಳೂರಿಗೆ ಶ್ರೀಲಂಕಾ ಪ್ರಜೆಗಳನ್ನು ಕಳುಹಿಸಿದ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಎಲ್‌ಟಿಟಿಇ ಉಗ್ರ, ಶ್ರೀಲಂಕಾ ಪ್ರಜೆ ಈಸನ್‌ ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಟಗಾರ ನಾಗಿದ್ದು, ಈತ 32 ಮಂದಿ ಶ್ರೀಲಂಕಾ ಪ್ರಜೆಗಳನ್ನು ತಮಿಳುನಾಡಿನಿಂದ ಮಂಗಳೂರಿಗೆ ಕಳುಹಿಸಲು ಹವಾಲ ಮೂಲಕ 2 ಲಕ್ಷ ರೂ. ವ್ಯವಹಾರ ನಡೆಸಿರು ವುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆಲವು ತಿಂಗಳ ಹಿಂದೆ ಎನ್‌ಐಎ ಅಧಿಕಾರಿಗಳು ಎಲ್‌ಟಿಟಿಇ ಉಗ್ರ ಮೊಹಮ್ಮದ್‌ ಇಮ್ರಾನ್‌ ಖಾನ್‌ ಅಲಿಯಾಸ್‌ ಹಾಜ ನಜಾರ್ಬಿಡೇನ್‌ (39), ತಮಿಳುನಾಡಿನ ಅಯ್ಯ ಅಲಿಯಾಸ್‌ ದಿನಕರನ್‌, ಕಾಶಿ ವಿಶ್ವನಾಥನ್‌ ಸಹಿತ 6 ಮಂದಿಯನ್ನು ಬಂಧಿಸಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಈಸನ್‌ ಹೆಸರು ಕೇಳಿ ಬಂದಿತ್ತು. ಈಸನ್‌, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಕಳ್ಳ ಸಾಗಣೆದಾರನಾಗಿದ್ದಾನೆ. ಈತ ಶ್ರೀಲಂಕಾ ಪ್ರಜೆಗಳಿಗೆ ಕೆನಡಾಕ್ಕೆ ವಲಸೆ ಹೋಗಲು ಬೇಕಾದ ಕಾನೂನುಬದ್ಧ ದಾಖಲೆಗಳನ್ನು ಕಲ್ಪಿಸಿ ಉದ್ಯೋಗ ಒದಗಿಸುವ ಸುಳ್ಳು ಭರವಸೆಗಳನ್ನು ನೀಡಿದ್ದ. ಆದರೆ ಶ್ರೀಲಂಕಾದಿಂದ ಹಡಗಿನ ಮೂಲಕ ತಮಿಳುನಾಡಿಗೆ ಹಾಗೂ ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿನ ವಿವಿಧೆಡೆ ಕಳುಹಿಸಿ ವಂಚಿಸಿದ್ದಾನೆ.

ವಿದೇಶಕ್ಕೆ ಕಳುಹಿಸಲು ಪ್ರತಿ ಶ್ರೀಲಂಕಾ ಪ್ರಜೆಯಿಂದ 2-3 ಲಕ್ಷ ರೂ. ಪಡೆದುಕೊಂಡಿದ್ದ ಈಸನ್‌, ಶ್ರೀಲಂಕಾದಿಂದ ಹಡಗಿನ ಮೂಲಕ ತಮಿಳುನಾಡಿಗೆ ಕಳುಹಿಸಿದ್ದ. ಬಳಿಕ ಈ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಲು ಇಮ್ರಾನ್‌ ಖಾನ್‌ಗೆ ಸೂಚಿಸಿದ್ದ. ಈತ ಒಂದೆರಡು ದಿನಗಳ ಕಾಲ ಆಶ್ರಯ ನೀಡಿದ್ದ. ಬಳಿಕ ಈಸನ್‌ ಸೂಚನೆ ಮೇರೆಗೆ ಅಯ್ಯ ಅಲಿಯಾಸ್‌ ದಿನಕರನ್‌ ಹಾಗೂ ಕಾಶಿ ವಿಶ್ವನಾಥನ್‌ ಜತೆ ಶ್ರೀಲಂಕಾ ಪ್ರಜೆಗಳನ್ನು ಕಳುಹಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಹವಾಲ ಮೂಲಕ 2 ಲ.ರೂ. ನೀಡಿದ್ದ ಈಸನ್‌
38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಹಡಗಿನ ಮೂಲಕ ತಮಿಳುನಾಡಿಗೆ ಕಳುಹಿಸಿದ್ದ ಈಸನ್‌, ಅವರನ್ನು ತಮಿಳುನಾಡಿನಿಂದ ಮಂಗಳೂರಿಗೆ ಕಳುಹಿಸಲು ತಮಿಳುನಾಡಿನ ಮಧುರೈ ಮೂಲದ ದಿನಕರನ್‌ ಮತ್ತು ಕಾಶಿ ವಿಶ್ವನಾಥನ್‌ಗೆ 2 ಲಕ್ಷ ರೂ. ಅನ್ನು ಹವಾಲ ಮೂಲಕ ನೀಡಿದ್ದ. ಆದರೆ ಮಂಗಳೂರಿನಿಂದ ಕೆನಡಾಗೆ ಕಳುಹಿಸಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಶ್ರೀಲಂಕಾ ಪ್ರಜೆಗಳು ಮಂಗಳೂರಿನ ಕೆಲವೆಡೆ ವಾಸವಾಗಿದ್ದರು.

ಈ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ವಿಭಾಗದ ಪೊಲೀಸರು 2021ರ ಜೂ. 6ರಂದು 38 ಮಂದಿಯನ್ನು ಬಂಧಿಸಿದ್ದರು. ಅವರು ಅಕ್ರಮವಾಗಿ ಬಂದಿರುವುದು ಸ್ಪಷ್ಟವಾದ ಕಾರಣ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು.

Advertisement

10 ವರ್ಷಗಳಿಂದ ತಮಿಳುನಾಡಿನಲ್ಲಿದ್ದ ಇಮ್ರಾನ್‌
8-10 ವರ್ಷಗಳ ಹಿಂದೆಯೇ ತಮಿಳುನಾಡಿಗೆ ಬಂದು ನೆಲೆಸಿದ್ದ ಇಮ್ರಾನ್‌ ಖಾನ್‌, ಆಧಾರ್‌ ಕಾರ್ಡ್‌ ಹಾಗೂ ಚುನಾವಣ ಗುರುತಿನ ಚೀಟಿ ಮಾಡಿಸಿಕೊಂಡಿದ್ದ. ಜತೆಗೆ ಶ್ರೀಲಂಕಾದ ಎಲ್‌ಟಿಟಿಇ ಸಂಘಟನೆ ಸದಸ್ಯರ ಜತೆ ನಿರಂತರ ಸಂಪರ್ಕ ಹೊಂದಿದ್ದು, ಅವರ ಸೂಚನೆ ಮೇರೆಗೆ ದಕ್ಷಿಣ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಜತೆಗೆ ಈಸನ್‌ ಸೂಚನೆ ಮೇರೆಗೆ ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ಭಾರತಕ್ಕೆ ಕರೆಸಿಕೊಳ್ಳುವುದು ಹಾಗೂ ಭಾರತೀ ಯರನ್ನು ಅಕ್ರಮವಾಗಿ ಶ್ರೀಲಂಕಾಕ್ಕೆ ಕಳುಹಿಸುವ ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಣೆದಾರನಾಗಿದ್ದ. ಜತೆಗೆ ತಮಿಳುನಾಡಿನಲ್ಲಿ ಎಲ್‌ಟಿಟಿಇ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಜತೆಗೆ ತಮಿಳುನಾಡಿನಲ್ಲಿ ಹವಾಲಾ ದಂಧೆಯನ್ನೂ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

 ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next