Advertisement

ಕಿಡ್ನಾಪ್‌ ಕಥೆ ಕಟ್ಟಿದ ಆರೋಪಿ ಅಂದರ್‌

12:46 PM Nov 19, 2018 | Team Udayavani |

ಬೆಂಗಳೂರು: ಮೊದಲು ಮಾಡಿದ ಸಾಲ ತೀರಿಸಲು ಮತ್ತೂಂದೆಡೆ ಸಾಲ ಮಾಡುವುದು. ಕೆಲವೊಮ್ಮೆ ಆಸ್ತಿ ಅಡಮಾನ ಇಡುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಶೋಕಿಲಾಲಾ ಮೋಜಿನ ಜೀವನ ನಡೆಸಲು ಮಾಡಿದ ಸಾಲದ ಮರುಪಾವತಿ ಮಾಡಲು ಅಪಹರಣಕ್ಕೊಳಗಾದ ಕಥೆ ಕಟ್ಟಿ ಕೊನೆಗೆ ಪೊಲೀಸರ ಅತಿಥಿಯಾಗಿರುವ ಪ್ರಸಂಗ ನಡೆದಿದೆ.

Advertisement

ಹೊಗಸಂದ್ರ ನಿವಾಸಿ ಪ್ರತಾಪ (22) ಕಥೆ ಕಟ್ಟಿ ಪೊಲೀಸರ ಬಲೆಗೆ ಬಿದ್ದ ಆರೋಪಿ. ಫೋಟೋ ಸ್ಟುಡಿಯೋ ನಡೆಸುತ್ತಿರುವ ಆರೋಪಿ, ಮೋಜಿನ ಜೀವನ ನಡೆಸುವ ಉದ್ದೇಶಕ್ಕೆ ಸ್ನೇಹಿತರಿಂದ ಸುಮಾರು 40 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಸಾಧ್ಯವಾಗದೆ ಈ ರೀತಿ ಕಥೆ ಹೆಣೆದು ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಸುಮಾರು 2 ವರ್ಷಕ್ಕೆ ಬೇಕಾದ ಟ್ರೋಫಿಗಳನ್ನು ಪೂರೈಕೆ ಮಾಡಲು ಗುತ್ತಿಗೆ ಪಡೆಯಬೇಕಿದ್ದು, ಇದಕ್ಕೆ ಆಡಳಿತ ಮಂಡಳಿಗೆ ಲಂಚ ಕೊಡಬೇಕು ಎಂದು ರೈಲು ಬಿಟ್ಟ ಆರೋಪಿ ಪ್ರತಾಪ, ಕೆಲ ದಿನಗಳ ಹಿಂದೆ ತನ್ನ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸುಮಾರು 40 ಲಕ್ಷ ರೂ. ಸಾಲ ಪಡೆದುಕೊಂಡಿದ್ದ.

ಈ ವೇಳೆ ನ.10ರಂದು ಹಣ ಹಿಂದಿರುಗಿಸುವುದಾಗಿಯೂ ಸಾಲ ಕೊಟ್ಟವರಿಗೆ ಭರವಸೆ ನೀಡಿದ್ದ. ಆದರೆ, ಇದೇ ಹಣದಿಂದ ಮೋಜಿನ ಜೀವನ ನಡೆಸಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದರು.

ಪೊಲೀಸ್‌ ಸಹಾಯವಾಣಿಗೆ ಕರೆ: ನ.11ರಂದು ತನ್ನ ಸ್ನೇಹಿತ ಸುರೇಶ್‌ ಎಂಬುವವರ ಪತ್ನಿಗೆ ಕರೆ ಮಾಡಿದ ಆರೋಪಿ, ನ.10ರಂದು ಸಂಜೆ 4 ಗಂಟೆ ಸುಮಾರಿಗೆ ಯಾರೋ ಅಪರಿಚಿತರು ಹರಿನಗರ ಕ್ರಾಸ್‌ನ ಪೆಟ್ರೋಲ್‌ ಬಂಕ್‌ ಬಳಿ ತನ್ನನ್ನು ಅಪಹರಿಸಿ, ಕಾರಿನಲ್ಲಿ ಕರೆದೊಯ್ದು ಕನಕಪುರ ರಸ್ತೆಯಲ್ಲಿರುವ ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದರು.

Advertisement

ಬಳಿಕ ಮತ್ತೂಂದು ಕಾರಿನ ಮೂಲಕ ಮಡಿಕೇರಿಗೆ ಕರೆದೊಯ್ದಿದ್ದಾರೆ ಎಂದು ಹೇಳಿ ಮೊಬೈಲ್‌ ಸ್ವಿಚ್‌ ಆಫ್ ಮಾಡಿದ್ದ. ಅಲ್ಲದೆ, ಸಾಲ ನೀಡಿದ ಎಲ್ಲರಿಗೂ ಕರೆ ಮಾಡಿ ಅಪಹರಣದ ಕಥೆ ಹೇಳಿದ್ದ. ಇದರಿಂದ ಆತಂಕಗೊಂಡ ಸ್ನೇಹಿತ ಸುರೇಶ್‌, ಕೂಡಲೇ ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಪಡೆದ ನಂತರ  ಕಾರ್ಯಪ್ರವೃತ್ತರಾದ ಪೊಲೀಸರು, ಅಪಹರಣ ನಡೆದಿತ್ತು ಎನ್ನಲಾದ ಪೆಟ್ರೋಲ್‌ ಬಂಕ್‌ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಆದರೆ ಅಲ್ಲೆಲ್ಲೂ ಅಪಹರಣದ ದೃಶ್ಯ ಸೆರೆಯಾಗಿರಲಿಲ್ಲ. ಜತೆಗೆ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದರೂ ಪ್ರತಾಪನ ಸುಳಿವು ಸಿಕ್ಕಿರಲಿಲ್ಲ. ಈ ಮಧ್ಯೆ ಆರೋಪಿ ನ.13ರ ರಾತ್ರಿ 9.30ರ ಸುಮಾರಿಗೆ ನೈಸ್‌ ರಸ್ತೆ ಬಳಿ ಪ್ರತ್ಯಕ್ಷನಾಗಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟ: ಪ್ರಕರಣ ಸಂಬಂಧ ನ.15ರಂದು ಪ್ರತಾಪನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಆರೋಪಿ ಗೊಂದಲದ ಹೇಳಿಕೆ ನೀಡಿದ್ದ. ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. “ಸ್ನೇಹಿತರಿಂದ 40 ಲಕ್ಷ ರೂ. ಸಾಲ ಪಡೆದಿದ್ದೆ. ಅದನ್ನು ತೀರಿಸಲು ಬೇರೆ ದಾರಿ ಇರಲಿಲ್ಲ.

ಹೀಗಾಗಿ ಅಪಹರಣದ ನಾಟಕವಾಡಿದರೆ, ಸ್ನೇಹಿತರು ಹಾಗೂ ಸಂಬಂಧಿಕರು ಹಣ ಕೊಟ್ಟು ಬಿಡಿಸಿಕೊಂಡು ಹೋಗುತ್ತಾರೆ. ಬಳಿಕ ಅದೇ ಹಣದಿಂದ ಸಾಲ ಹಿಂದಿರುಗಿಸಿ, ಅಡಮಾನ ಇಟ್ಟಿರುವ ಉಂಗುರುಗಳನ್ನು ಬಿಡಿಸಿಕೊಳ್ಳಬಹುದು ಎಂದು ತೀರ್ಮಾನಿಸಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗೋವಾ, ಮುಂಬೈ ಪ್ರವಾಸ: ಸುಳ್ಳು ಹೇಳಿ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದ ಪ್ರತಾಪ, ಆ ಹಣದಲ್ಲಿ ಗೋವಾ, ಕೋಲ್ಕತಾ ಹಾಗೂ ಮುಂಬೈಗೆ ವಿಮಾನದಲ್ಲಿ ತೆರಳಿ, ಬಿಂದಾಸಾಗಿ ಪ್ರವಾಸ ಮಾಡಿದ್ದಾನೆ. ಹಣ ಖಾಲಿಯಾಗುತ್ತಿದ್ದಂತೆ ನಗರಕ್ಕೆ ವಾಪಸ್‌ ಬಂದ ಆರೋಪಿಗೆ ಸ್ನೇಹಿತರು ಹಣ ಹಿಂದಿರುಗಿಸುವಂತೆ ದುಂಬಾಲು ಬಿದ್ದಿದ್ದಾರೆ. ಇವರ ಕಾಟದಿಂದ ತಪ್ಪಿಸಿಕೊಳ್ಳಲು ಉಪಾಯ ಮಾಡಿದ ಪ್ರತಾಪ, ಅಪಹರಣದ ನಾಟಕವಾಡಿದ್ದಾನೆ ಎಂದು ಪೊಲೀಸರು ಹೇಳಿದರು.

ಡಿಸಿಪಿಗೂ ಕರೆ ಮಾಡಿದ್ದ ಪ್ರತಾಪ: ಆರೋಪಿ ನ.11ರಂದು ತನ್ನ ಸ್ನೇಹಿತ ಸುರೇಶ್‌ ಎಂಬುವವರ ಪತ್ನಿಗೆ ಮಾತ್ರವಲ್ಲದೆ, ಪೊಲೀಸ್‌ ಸಹಾಯವಾಣಿ ನಮ್ಮ-100 ಹಾಗೂ ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಅವರಿಗೂ ಕರೆ ಮಾಡಿ, “ನನ್ನನ್ನು ಅಪಹರಣ ಮಾಡಿದ್ದಾರೆ’ ಎಂದು ಕಥೆ ಹೇಳಿದ್ದ. ಬಳಿಕ ನ.13ರಂದು ರಾತ್ರಿ 9.30ಕ್ಕೆ ತಾನೇ ನಮ್ಮ-100ಗೆ ಕರೆ ಮಾಡಿ “ಅಪಹರಣಕಾರರು ನನ್ನನ್ನು ನೈಸ್‌ ರಸ್ತೆ ಬಳಿ ಬಿಟ್ಟು ಹೋಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾಗಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next