Advertisement

ಯೋಧನ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸಿ: ಎಸ್‌.ಎಂ.ಕೃಷ್ಣ

10:44 PM Feb 16, 2020 | Lakshmi GovindaRaj |

ಬೆಂಗಳೂರು: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಎಚ್‌.ಗುರು ಅವರ ಚಿತಾಭಸ್ಮವನ್ನು ಈವರೆಗೆ ವಿಸರ್ಜಿಸದಿರುವುದು, ಸ್ಮಾರಕ ನಿರ್ಮಿಸದೆ ನಿರ್ಲಕ್ಷಿಸಿರುವುದನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು, ಕೂಡಲೇ ಈ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Advertisement

ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಎಸ್‌.ಎಂ.ಕೃಷ್ಣ ಪತ್ರ ಬರೆದಿದ್ದಾರೆ. ಕಳೆದ ವರ್ಷ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಎಚ್‌.ಗುರು ಹುತಾತ್ಮರಾಗಿದ್ದರು. ಆದರೆ, ವರ್ಷ ಕಳೆದರೂ ಯೋಧನ ಚಿತಾಭಸ್ಮವನ್ನು ವಿಸರ್ಜಿಸದೆ, ಸ್ಮಾರಕವನ್ನೂ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಎಸ್‌.ಎಂ.ಕೃಷ್ಣ ವಿಷಾದಿಸಿದ್ದಾರೆ.

ಪುಲ್ವಾಮಾ ದಾಳಿ ಅತ್ಯಂತ ಘೋರ ಕೃತ್ಯವಾಗಿದ್ದು, ಇಡೀ ರಾಷ್ಟ್ರ ದಾಳಿಯ ಬಗ್ಗೆ ಕಂಬನಿ ಮಿಡಿದಿತ್ತು. ಯೋಧನ ಬಲಿದಾನ ಮುಂದಿನ ಪೀಳಿಗೆಗೆ ಆದರ್ಶ ವಾಗಬೇಕಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕಾದ ಜಿಲ್ಲಾಡಳಿತ, ಸರ್ಕಾರ ಕ್ರಮ ವಹಿಸದೆ ನಿರ್ಲ ಕ್ಷಿಸಿರುವುದು ಸಾರ್ವಜನಿಕರ ಅವಕೃಪೆಗೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಆಡಳಿತ, ಸರ್ಕಾರ ಇಂತಹ ವಿಷಯಗಳ ಬಗ್ಗೆ ತುರ್ತು ಗಮನ ವಹಿಸುವುದು ಅವಶ್ಯಕ.

ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಯಾದ ಕಾವೇರಿ ನೀರಾವರಿ ನಿಗಮದ ಮೂಲಕ ತುರ್ತಾಗಿ ವೀರ ಯೋಧನ ಸ್ಮಾರಕ ನಿರ್ಮಾಣಕ್ಕೆ ಕ್ರಮ ವಹಿಸಿ, ನಿರ್ವಹಣೆಯನ್ನೂ ನಿಗಮದ ಮೂಲಕ ನಿರ್ವಹಿಸಿ, ಯೋಧನ ಬಲಿದಾನವನ್ನು ನೆನೆಯುವಂತಹ ಕಾರ್ಯ ಆಗಬೇಕೆಂದು ಆಶಿಸಿದ್ದಾರೆ. ವರ್ಷವಾದರೂ ಯೋಧನ ಚಿತಾಭಸ್ಮವನ್ನು ವಿಸರ್ಜನೆ ಮಾಡದಿರಲು ಕಾರಣವನ್ನು ಪತ್ತೆ ಹಚ್ಚಿ ಶಾಸ್ತ್ರೋಕ್ತವಾಗಿ ವಿಸರ್ಜನಾ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡ ಬೇಕು ಎಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next