Advertisement

ಮಳೆಗಾಲ ಆರಂಭಕ್ಕೂ ಮುನ್ನವೇ ಸೂಕ್ತ ವ್ಯವಸ್ಥೆ ಮಾಡಿ

01:12 AM Apr 16, 2022 | Team Udayavani |

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಮರ ಬಿದ್ದ, ಮನೆಗಳಿಗೆ ನೀರು ನುಗ್ಗಿರುವಂಥ ಪ್ರಕರಣಗಳು ವರದಿಯಾಗಿದೆ. ಪ್ರತಿ ಮಳೆಗಾಲದಲ್ಲೂ ಇಂಥ ಸಮಸ್ಯೆಗಳು ಮಾಮೂಲು ಎನ್ನುವಂಥಾಗಿದ್ದು, ಸರಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಕುರುಡಾಗಿದ್ದಾರೆ ಎಂಬ ಅನುಮಾನಗಳೂ ಜನಸಾಮಾನ್ಯರಲ್ಲಿ ಮೂಡಿವೆ. ಅದರಲ್ಲೂ ಬೆಂಗಳೂರಿನಲ್ಲಿ ಸುರಿದ ಮಳೆ, ಅಬ್ಬರವನ್ನೇ ಸೃಷ್ಟಿಸಿದ್ದು, ಕೆಲವು ಪ್ರದೇಶಗಳಲ್ಲಿ ತೀರಾ ಸಮಸ್ಯೆಯುಂಟಾಗಿರುವುದು ಕಂಡು ಬಂದಿದೆ.

Advertisement

ವಿಚಿತ್ರವೆಂದರೆ ರಾಜ್ಯದಲ್ಲಿ ಇನ್ನೂ ಮಳೆಗಾಲ ಆರಂಭವಾಗಿಲ್ಲ. ಈಗ ಮುಂಗಾರು ಪೂರ್ವ ಬೇಸಗೆ ಮಳೆ ಸುರಿಯುತ್ತಿದೆ. ಆದರೆ ಮೂರು ದಿನಗಳ ಮಳೆಯ ಪರಿಣಾಮದಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವುದು, ರಸ್ತೆಗಳು ನೀರಿನಿಂದ ತುಂಬಿರುವಂಥದ್ದು, ಅಲ್ಲಲ್ಲಿ ಮರ ಬಿದ್ದಿರುವಂಥದ್ದನ್ನು ಗಮನಿಸಬಹುದಾಗಿದೆ. ಹಾಗೆಯೇ ವಿದ್ಯುತ್‌ ಕಂಬವೊಂದು ಧರೆಗುರುಳಿ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆಯೂ ಬೆಂಗಳೂರಿನಲ್ಲಿಯೇ ನಡೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಪ್ರತೀ ಬಾರಿಯೂ ಮಳೆಗಾಲ ಶುರುವಾದ ಮೇಲೆ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆಗಳು ಈಗ ಒಂದಷ್ಟು ಬೇಗನೆ ಶುರುವಾಗಿರುವುದು ಸಮಸ್ಯೆ ಇನ್ನಷ್ಟು ಉಲ್ಪಣಕ್ಕೆ ಕಾರಣವಾಗಿವೆ. ಏಕೆಂದರೆ ಇನ್ನೂ ಮಳೆಗಾಲ ದೂರವಿದೆ ಎಂದೇ ಅಂದುಕೊಂಡಿರುವ ಸ್ಥಳೀಯಾಧಿಕಾರಿಗಳು, ಮಳೆಗಾಲ ಸಂದರ್ಭದ ಸಮಸ್ಯೆಗಳ ನಿಭಾವಣೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಂಡೇ ಇಲ್ಲ. ಈಗಿನ ಸ್ಥಿತಿ ನೋಡಿದರೆ ಇದು ಎಲ್ಲರ ಕಣ್ಣಿಗೆ ಕಾಣಿಸುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲದಲ್ಲಿ ಹೆಚ್ಚು ಹಾನಿಗೀಡಾಗುವ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲಿ. ಇಲ್ಲದಿದ್ದರೆ, ಮುಂದೆ ಬರುವ ಮಳೆಗಾಲದ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜತೆಗೆ ತುರ್ತು ಸಂದರ್ಭಕ್ಕಾಗಿ ಕೆಲವು ಸಿಬಂದಿ ನೇಮಕ ಮಾಡಲಿ. ವಿದ್ಯುತ್‌ ತಂತಿಗಳ ಮೇಲೆ ಮರದ ಕೊಂಬೆಗಳು ಬೀಳುವಂತಿದ್ದರೆ ಅಂಥವುಗಳನ್ನು ಬೇಗನೆ ತೆರವು ಮಾಡಲಿ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ವಾಹನ ಸವಾರರ ಓಡಾಟಕ್ಕೆ ಅನುವು ಮಾಡಿಕೊಡಲಿ. ಇಲ್ಲದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮರ್ಯಾದೆ ಹೋಗುವುದು ಖಚಿತ.

ಇದು ಬೆಂಗಳೂರಿಗಾದರೆ, ಹಳ್ಳಿಗಳಲ್ಲಿ ಸಿಡಿಲಿನಿಂದ ಸಾಯುವವರ ಸಂಖ್ಯೆ ಹೆಚ್ಚು. ಇದಕ್ಕೆ ಕಾರಣ ನಮ್ಮಲ್ಲಿ ಇನ್ನೂ ಸಿಡಿಲು ಮುನ್ನೆಚ್ಚರಿಕಾ ವ್ಯವಸ್ಥೆ ಇಲ್ಲದಿರುವುದು. ಇದನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡು ಮಾನವ ಮತ್ತು ಜಾನುವಾರುಗಳ ಪ್ರಾಣ ಉಳಿಸಬಹುದು. ಈಗಾಗಲೇ ಗ್ರಾಮಾಂತರ ಪ್ರದೇಶದಲ್ಲಿ ಇಂಥ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ.

Advertisement

ಹಾಗೆಯೇ ಸಣ್ಣಪುಟ್ಟ ನಗರಗಳು, ಹಳ್ಳಿಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಗುರುತಿಸಿ ಇವುಗಳನ್ನೂ ನಿವಾರಿಸಬೇಕು. ಈ ಕೆಲಸಗಳನ್ನು ಸರಕಾರದ ಜತೆಗೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೂ ಸೇರಿಕೊಂಡು ಮಾಡಬೇಕು. ಈ ಬಗ್ಗೆ ಮೊದಲೇ ಎಚ್ಚರಿಕೆ ವಹಿಸದಿದ್ದರೆ ಅಪಾರ ಪ್ರಮಾಣದ ಹಾನಿ ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next