ಕೆಲ ಸಮಯದ ಹಿಂದೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ಹುಟ್ಟಿದ ಕೂಡಲೇ ನವಜಾತ ಶಿಶುವೊಂದು ದಿಢೀರನೆ ಅಸುನೀಗಿತ್ತು. ಈ ಘಟನೆಗೆ ಕಾರಣ ಕೇಳಿದಾಗ ಉಸಿರಾಟದ ಸಮಸ್ಯೆಯಿಂದಾಗಿ ಮಗು ಪ್ರಾಣ ಬಿಟ್ಟಿದೆ ಎಂದು ವೈದ್ಯರು ಹೇಳಿದ್ದರು. ಇದಾದ ಬಳಿಕ ರಾಜ್ಯದ ಅನೇಕ ಕಡೆ ಇಂಥದ್ದೇ ಘಟನೆ ಮರುಕಳಿಸುತ್ತಿವೆ.
ಹುಟ್ಟಿದ ಮಕ್ಕಳು ಜೀವ ಬಿಡುವ ಪ್ರಕರಣಗಳು ನಿಧಾನವಾಗಿ ಹೆಚ್ಚಾಗುತ್ತಿದೆ. ಆದರೆ ಇಂಥ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಅದರ ಹಿಂದಿನ ಅಸಲಿ ಕಾರಣಗಳೇನು? ಅನ್ನೋದಕ್ಕೆ ಇಲ್ಲೊಂದು ಹೊಸಬರ ತಂಡ “ಡಿಸೆಂಬರ್ 24′ ಎಂಬ ಸಿನಿಮಾ ಮೂಲಕ ಉತ್ತರ ಹುಡುಕಲು ಹೊರಟಿದೆ. “ಎಂ.ಜಿ.ಎನ್.ಪ್ರೋಡಕ್ಷನ್’ ಬ್ಯಾನರ್‌ನಲ್ಲಿ ಬಸವರಾಜ್ ಎಸ್.
ನಂದಿ, ದೇವು ಹಾಸನ್ ಜಂಟಿಯಾಗಿ ನಿರ್ಮಿಸುತ್ತಿರುವ “ಡಿಸೆಂಬರ್ 24′ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಮೆಡಿಕಲ್ ರಿಸರ್ಚ್ ವೊಂದರ ಸುತ್ತ ನಡೆಯುವ ಕಥಾನಕ ಹೊಂದಿರುವ ಈ ಚಿತ್ರಕ್ಕೆ ನವ ನಿರ್ದೇಶಕ ನಾಗರಾಜ್ ಎಂ.ಜಿ ಗೌಡ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಮತ್ತು ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಪದಾಧಿಕಾರಿ ಭಾ.ಮ ಹರೀಶ್, ಭಾ.ಮ ಗಿರೀಶ್, ನಟ ಪ್ರಥಮ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಚಿತ್ರಕ್ಕೆ ಶುಭ ಕೋರಿದರು.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗರಾಜ್ ಎಂ.ಜಿ ಗೌಡ, “ನವಜಾತ ಶಿಶುಗಳ ಸಾವಿಗೆ ಒಂದೇ ಕಾರಣ ವೆಂಟಿಲೇಷನ್ ಸಮಸ್ಯೆ ಕಾರಣ ಅನ್ನೋದು ವೈದ್ಯರು ಹೇಳುವ ಮಾತು. ಈ ಸಮಸ್ಯೆಗೆ ಕಾರಣ ಹುಡುಕೋದು ನಮ್ಮ ಚಿತ್ರದ ಮುಖ್ಯ ಉದ್ದೇಶ. ಔಷಧವೊಂದರ ಸಂಶೋಧನೆಗೆ ವೈದ್ಯಕೀಯ ವಿದ್ಯಾರ್ಥಿಗಳು ಕಾಡಿಗೆ ತೆರಳಿರುತ್ತಾರೆ. ಗಿಡಮೂಲಿಕೆಗಳನ್ನು ಹುಡುಕಲು ಹೊರಟ ಅವರ ಮುಂದೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಮತ್ತೆ ಅವರು ಕಾಡಿನಿಂದ ವಾಪಾಸು ಬರುತ್ತಾರಾ? ಔಷಧ ಕಂಡು ಹಿಡಿಯುತ್ತಾರಾ? ಅವರಿಗೆ ಎದುರಾಗುವ ಸಮಸ್ಯೆ ಯಾವುದು? ಹೀಗೆ ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳ ಮೂಲಕ “ಡಿಸೆಂಬರ್ 24′ ಚಿತ್ರವನ್ನು ತೆರೆಮೇಲೆ ತರಲಾಗುತ್ತದೆ. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕಳೆದ ಒಂದೂವರೆ ವರ್ಷಗಳಿಂದ ಸಾಕಷ್ಟು ಜನ ವೈದ್ಯರನ್ನು ಭೇಟಿಯಾಗಿ, ಅವರನ್ನು ಸಂದರ್ಶನ ಮಾಡಿ ತಿಳಿದುಕೊಂಡು, ಸಂಶೋಧನೆ ನಡೆಸಿ ಸಿದ್ದಪಡಿಸಿರುವ ಕಥೆ ಇದಾಗಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.