“ಆ ಕರಾಳ ರಾತ್ರಿ’, “ಪುಟ 109′ ಚಿತ್ರಗಳ ನಂತರ ನಟ ಜಯರಾಮ್ ಕಾರ್ತಿಕ್ (ಜೆ.ಕೆ) ಮತ್ತೂಂದು ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ. ಅಂದಹಾಗೆ ಈ ಬಾರಿ ಪಕ್ಕಾ ಲವರ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಜೆ.ಕೆ, ತನ್ನ ಹುಡುಗಿಯನ್ನು ಒಲಿಸಿಕೊಳ್ಳಲು ಗಿಟಾರಿಸ್ಟ್ ಆಗಿದ್ದಾರೆ!
ಹೌದು, ಜೆ.ಕೆ ಸದ್ಯ “ನೀರೇ’ ಎನ್ನುವ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಬಳಿ ಕೆಲ ವರ್ಷ ಸ್ಕ್ರಿಪ್ಟ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಶ್ರೀಚರಣ್ “ನೀರೇ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಕನ ಪಟ್ಟವನ್ನು ಅಲಂಕರಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದ್ದು, ಡಾ. ವಿ ನಾಗೇಂದ್ರ ಪ್ರಸಾದ್ ಮಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದರು.
ಇನ್ನು “ನೀರೇ’ ಎಂಬ ಪದಕ್ಕೆ ಹೆಣ್ಣು ಎಂಬ ಅರ್ಥವಿದ್ದು, ಶೀರ್ಷಿಕೆಯೇ ಹೇಳುವಂತೆ ಚಿತ್ರದಲ್ಲಿ ಒಂದು ಹೆಣ್ಣು ಹೇಗಿರಬೇಕು, ಹೇಗಿರಬಾರದು, ಆಕೆಯ ಮಹತ್ವ, ಸ್ನೇಹ-ಪ್ರೀತಿಯ ಮೌಲ್ಯಗಳನ್ನು ಹೇಳಲಾಗುತ್ತಿದೆಯಂತೆ. ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀಚರಣ್, “ನೀರೇ ಅಂದ್ರೆ ಹೆಣ್ಣು. ಹೆಣ್ಣು ಅಂದ್ರೆ ಪ್ರಕೃತಿ. ಅದನ್ನು ನಾವು ತಾಯಿಗೆ ಹೋಲಿಕೆ ಮಾಡ್ತಿವಿ. ಈ ಚಿತ್ರದಲ್ಲಿ ನಾಯಕನಿಗೆ ತನ್ನ ತಾಯಿ ಮತ್ತು ಸ್ನೇಹಿತ ಇಬ್ಬರೇ ಮುಖ್ಯವಾಗಿರುತ್ತಾರೆ. ಒಮ್ಮೆ ಇವನ ಬದುಕಿನಲ್ಲಿ ತಾಯಿ, ಸ್ನೇಹಿತ ಇಬ್ಬರೂ ದೂರವಾಗ್ತಾರೆ. ಆಗ ಒಬ್ಬಂಟಿಯಾಗುವ ನಾಯಕನ ಜೀವನವನ್ನು ಸರಿ ಮಾಡಲು ತಾಯಿಯೇ ಪ್ರಕೃತಿಯ ರೂಪದಲ್ಲಿ, ಅಂದ್ರೆ ಮಳೆ ರೂಪದಲ್ಲಿ ಬಂದು ನಾಯಕನ ಜೀವನವನ್ನು ಮತ್ತೆ ಮೊದಲಿನಂತೆ ಮಾಡುತ್ತದೆ. ಅದು ಹೇಗೆ ಅನ್ನೋದೆ ಚಿತ್ರ’ ಎಂದು ವಿವರಣೆ ಕೊಡುತ್ತಾರೆ.
ಇನ್ನು “ನೀರೇ’ ಚಿತ್ರದಲ್ಲಿ ಗಿಟಾರಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುವ ಜೆ.ಕೆ ಅವರಿಗೆ ಸಮೀಕ್ಷಾ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ನಟ ದಿಲೀಪ್ ರಾಜ್ ಟೆಕ್ಕಿಯಾಗಿ ನಾಯಕನ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಮಂಜುನಾಥ ಹೆಗ್ಡೆ, ವಿಶ್ವ, ಅಮಿತ್, ಸಂಗೀತಾ, ರಮೇಶ್ ಭಟ್, ವಿನಯಾ ಪ್ರಸಾದ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ನೀರೇ’ ಚಿತ್ರಕ್ಕೆ ದೀಪಿತ್ ಬಿಜೈ ರತ್ನಾಕರ್ ಛಾಯಾಗ್ರಹಣ, ಗೌತಮ್ ನಾಯಕ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಸಂಗೀತ ಜೋಯೆಲ್ ಸಕ್ಕಾರಿ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಜಾತ ಸಣ್ಣಪ್ಪಯ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇನ್ನು “ನೀರೇ’ ಚಿತ್ರದ ಪೋಸ್ಟರ್‌ದಲ್ಲಿ ಜೆ.ಕೆ ಉದ್ದನೆಯ ಗಡ್ಡಬಿಟ್ಟು, ಗಿಟಾರ್ ಅನ್ನು ಹೆಗಲಿಗೇರಿಸಿಕೊಂಡು ಬುಲೆಟ್ ಸವಾರಿ ಮಾಡುತ್ತಿರುವ ಲುಕ್ ಹೊರಬಿದ್ದಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಗಿಟಾರಿಸ್ಟ್ ಒಬ್ಬರು ಬಿಟ್ಟು ಹೋಗಿದ್ದ ಬುಲೆಟ್‌ನ್ನು ಚಿತ್ರದಲ್ಲಿ ಬಳಸಲಾಗುತ್ತಿದೆಯಂತೆ.
ಸದ್ಯ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿರುವ “ನೀರೇ’ ಚಿತ್ರ ಇದೇ ತಿಂಗಳ ಎರಡನೇ ವಾರದಿಂದ ಚಿತ್ರೀಕರಣಕ್ಕೆ ಹೊರಡಲಿದ್ದು, ಉಡುಪಿ, ಚಿಕ್ಕಮಗಳೂರು, ತೀರ್ಥಹಳ್ಳಿ, ಬೆಂಗಳೂರು ಸುತ್ತಮುತ್ತ “ನೀರೇ’ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.