Advertisement

ಒಂದು ಕಿರುಚಿತ್ರ ನಿರ್ಮಾಣದ ಸುತ್ತ

07:22 PM Jun 27, 2019 | mahesh |

ಚಿತ್ರದಲ್ಲಿ ಅಭಿನಯಿಸಬೇಕು ಎನ್ನುವ ಕನಸು ಯಾರಿಗಿರಲ್ಲ ಹೇಳಿ? ಹೌದು, ಪ್ರತಿಯೊಬ್ಬನೂ ಒಮ್ಮೆಯಾದರೂ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿಯಾದರೂ ಅಭಿನಯಿಸಬೇಕು ಅಂತ ಆಸೆ ಪಟ್ಟಿರುತ್ತಾನೆ. ಅಂಥ ಆಸೆ ನನಗೂ ಇತ್ತು. ಅದರಲ್ಲೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆಯ ಮೂಲಕ ಏನನ್ನಾದರೂ ಸಾಧಿಸಬೇಕೆಂಬ ಆಸಕ್ತಿ ಹೆಚ್ಚು ಎಂದೇ ಹೇಳಬಹುದು.

Advertisement

ವಿಶ್ವವಿದ್ಯಾನಿಲಯ ಕಾಲೇಜಿಗೆ ಸೇರಿದ ನಂತರ ಪ್ರಥಮ ಪದವಿ ವ್ಯಾಸಂಗದಲ್ಲಿರುವಾಗ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನೆಲ್ಲ ಒಟ್ಟುಗೂಡಿಸಿ ಸೀನಿಯರ್, “ಯಾರಿಗೆಲ್ಲಾ ಕಿರುಚಿತ್ರದಲ್ಲಿ ಅಭಿನಯಿಸುವ ಆಸಕ್ತಿ ಇದೆ?’ಎಂದು ಕೇಳಿದಾಗ ಸಂತಸದಿಂದಲೇ ನಾನು ಕೈ ಮೇಲೆತ್ತಿದ್ದೆ.ಆದರೆ, ಅರ್ಧದಷ್ಟು ಶೂಟಿಂಗ್‌ ಆಗಿದ್ದ ಆ ಚಿತ್ರ ಕಾರಣಾಂತರಗಳಿಂದ ಅಲ್ಲಿಯೇ ಮುದುಡಿ ಹೋಯಿತು. ಕಿರುಚಿತ್ರದಲ್ಲಿ ಸಣ್ಣ ಪಾತ್ರದಲ್ಲಿಯಾದರೂ ಅಭಿನಯಿಸಬೇಕೆನ್ನುವ ನನ್ನ ಕನಸು ಕೈಗೂಡಲಿಲ್ಲ.

ದಿನಗಳುರುಳಿತು. ದ್ವಿತೀಯ ವರ್ಷದ ಪದವಿಗೆ ತಲುಪಿಯಾಗಿತ್ತು. ಒಂದು ದಿನ ನಮ್ಮ ಸೀನಿಯರ್‌ ಕರೆ ಮಾಡಿ ಹೊಸತೊಂದು ಕಿರುಚಿತ್ರ ತಯಾರಿ ಮಾಡುವ ಯೋಜನೆಯನ್ನು ಮುಂದಿಟ್ಟರು. “ಸ್ವದೇಶೀ ಉಳಿಕೆ’ ಎನ್ನುವ ಪರಿಕಲ್ಪನೆಯಲ್ಲಿ ಕಿರುಚಿತ್ರದ ಕಥೆಯನ್ನು ಕೂಡ ಹೇಳಿಯೇ ಬಿಟ್ಟರು. ನನಗಂತೂ ಚಿತ್ರದ ವಸ್ತು-ವಿಷಯ ತುಂಬ ಇಷ್ಟವಾಯಿತು. ಚಿತ್ರದಲ್ಲಿ ಅಭಿನಯಿಸಬೇಕೆಂಬ ಆಸೆ ಮನದಲ್ಲಿ ಮತ್ತೆ ಅರಳಿತು. ತದನಂತರ ಶುರುವಾಯಿತು ನೋಡಿ, ನಮ್ಮ ತಯಾರಿ.ಸೀನಿಯರ್‌-ಜೂನಿಯರ್ಸ್‌ ಒಟ್ಟಾದೆವು.ಚಿತ್ರದಲ್ಲಿ ಅಭಿನಯಿಸುವ ಆಸಕ್ತಿ ಇರುವವರೆಲ್ಲ ತಾವಾಗಿಯೇ ಮುಂದೆ ಬಂದರು. ಪಾತ್ರಗಳಿಗೆ ತಕ್ಕಂತೆ ನಟರನ್ನು ಆಯ್ಕೆ ಮಾಡಲಾಯಿತು. ಚಿತ್ರದ ಮುಖ್ಯ ಪಾತ್ರವಾದ ಅಮ್ಮ ಮತ್ತು ಮಗನ ಪಾತ್ರ ಅಭಿನಯಿಸಲಿರುವ ನನ್ನ ಸಹಪಾಠಿಗಳು ಅದಾಗಲೇ ಅಭ್ಯಾಸ ಪ್ರಾರಂಭಿಸಿಯಾಗಿತ್ತು. ನನಗೆ ಕಾಲೇಜು ವಿದ್ಯಾರ್ಥಿನಿಯ ಒಂದು ಕಿರು ಪಾತ್ರ ಲಭಿಸಿತು. ಆದರೂ ಅಭಿನಯಿಸುವ ಅವಕಾಶ ಲಭಿಸಿದ್ದರಿಂದ ನನಗೆ ಖುಷಿಯೋ ಖುಷಿ. ನಮ್ಮ ಕಾಲೇಜು, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರೋತ್ಸಾಹ, ಸಹಕಾರ ಮತ್ತು ವಿದ್ಯಾರ್ಥಿಗಳಾದ ನಮ್ಮೊಳಗಿನ ಆಸಕ್ತಿಯಿಂದ ಶೂಟಿಂಗ್‌ ಪ್ರಾರಂಭವಾಯಿತು.

ಮಡಕೆ ಮಾತಾಡಿದಾಗ ಎನ್ನುವ ಕುತೂಹಲ ಹುಟ್ಟಿಸುವ ಹೆಸರಿನಿಂದ ಕಿರುಚಿತ್ರ ಸಿದ್ಧವಾಯಿತು. ಕಿರುಚಿತ್ರ ನಿರ್ದೇಶಕ ನಮ್ಮ ಸೀನಿಯರ್‌ ವಿಶ್ವಾಸ್‌ ಅಡ್ಯಾರ್‌ ಅವರ ಕನಸಿನ ಕೂಸು ಜೀವ ಪಡೆಯಿತು. ಮಡಕೆ ಮಾತಾಡಿದಾಗ ಎಂಬ ಹೆಸರಿಟ್ಟುಕೊಂಡು ಚಿತ್ರವು ಏನನ್ನೋ ಹೇಳಹೊರಟಿತು. ಚಿತ್ರದ ಬಿಡುಗಡೆ ಸಮಾರಂಭವು ಸಮೀಪಿಸಿತು. ನಮಗೆಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ನಮ್ಮಿಂದ ಸಾಧ್ಯವಿದ್ದಷ್ಟು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಒಟ್ಟುಗೂಡಿಸಿದೆವು. ಕೊನೆಗೂ ಮಡಕೆ ಮಾತಾಡಿದಾಗ ಕಿರುಚಿತ್ರ ತನ್ನೊಳಗಿರಿಸಿದ ಸಂದೇಶವನ್ನು ವೀಕ್ಷಕರತ್ತ ತಲುಪಿತು. ಈ ಸುಂದರ ಕಾರ್ಯಕ್ರಮವನ್ನು ನಿರೂಪಿಸುವ ಭಾಗ್ಯ ನನ್ನದಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಚಿತ್ರೋತ್ಸವದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿತು.ಅದೇ ರೀತಿ ವೇಣೂರಿನಲ್ಲಿ ನಡೆದ ಕಲಾಕಾರ್‌ ಹಬ್ಬದ ಕಿರುಚಿತ್ರ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಯಿತು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡು ಸುಮಾರು 7000ಕ್ಕಿಂತಲೂ ಹೆಚ್ಚು ವೀಕ್ಷಕರನ್ನು ಪಡೆಯಿತು. ಹಲವು ಉತ್ತಮ ಪ್ರತಿಕ್ರಿಯೆಗಳು ಬಂದವು. ವಿದ್ಯಾರ್ಥಿಗಳಾದ ನಮಗೆ ಇದಕ್ಕಿಂತ ಮಿಗಿಲಾದ ಖುಷಿ ಬೇರೆ ಇದೆಯೆ !

Advertisement

ತೇಜಶ್ರೀ ಶೆಟ್ಟಿ . ಬೇಳ
ತೃತೀಯ ಪತ್ರಿಕೋದ್ಯಮ, ವಿ. ವಿ. ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next